ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ಹತ್ಯೆ ಕೇಸ್, ಆರು ಮಂದಿ ಬಂಧನ

ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಗುರುವಾರ ಆರು ಮಂದಿಯನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಗುರುವಾರ ಆರು ಮಂದಿಯನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ.

ಜುಲೈ 4 ರಂದು ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ನಾಳದಲ್ಲಿ ಗಂಗಿವಾಲ್ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ (31) ಮೇಲೆ ಆರು ಮಂದಿ ಚೂರಿಯಿಂದ ಇರಿದು ಕೊಂದಿದ್ದರು. ಅದೇ ದಿನ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೀಪಕ್ ಮೃತಪಟ್ಟಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಪ್ರವೀಣ್ ಮುದ್ಲಿಂಗನವರ್, ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ, ನಾಗರಾಜ್ ಹೆಗ್ಗಣ್ಣನವರ್ ವಿರುದ್ಧ ದೂರು ದಾಖಲಾಗಿತ್ತು. ಇವರೆಲ್ಲರೂ ಸಮೀಪದ ಗ್ರಾಮಗಳಲ್ಲಿ ತಲೆಮರೆಸಿಕೊಂಡಿದ್ದರು. ಗುರುವಾರ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. 

ದೀಪಕ್ ಪಟದಾರಿ ಎರಡು ವರ್ಷಗಳ ಹಿಂದೆ ಬೇರೊಂದು ಸಮುದಾಯದ ಮೇಟಿ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದು ಆತನೊಂದಿಗೆ ಆರೋಪಿಗಳ ದ್ವೇಷಕ್ಕೆ ಕಾರಣವಾಗಿತ್ತು. ಮೇಟಿ ಕುಟುಂಬ ಕೂಡ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೇ ದೀಪಕ್ ಅವರು ಗಂಗಿವಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಪ್ರೇಮ ವಿವಾಹ ಸಮಸ್ಯೆ ಹಾಗೂ ರಾಜಕೀಯ ಬಿಕ್ಕಟ್ಟು ಕೊಲೆಗೆ ಕಾರಣವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಬ್ಬರು ಕಳ್ಳರ ಬಂಧನ: ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಧಾರವಾಡದ ಹಲವು ಮನೆಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಾರದ ಹಿಂದೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ ಎರಡು ಮನೆಗಳಲ್ಲಿ ಕಳ್ಳತನವಾಗಿತ್ತು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಅವರಿಂದ 81 ಗ್ರಾಂ ಚಿನ್ನಾಭರಣ ಮತ್ತು 150 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com