ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆ ಬಂದ್ ಬಹುತೇಕ ಯಶಸ್ವಿ, ಅಲ್ಲಲ್ಲಿ ಪ್ರತಿಭಟನೆ, ಪೊಲೀಸ್ ಬಂದೋಬಸ್ತ್

ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದ ಒಡೆತನಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಇಂದು ಮಂಗಳವಾರ ಕರೆ ನೀಡಿದ್ದ ಚಾಮರಾಜಪೇಟೆ ಬಂದ್ ಬೆ ವ್ಯಾಪಕ ಬೆಂಬಲ ಸಿಕ್ಕಿದ್ದು ಬಹುತೇಕ ಯಶಸ್ವಿಯಾಗಿದೆ. 
ಚಾಮರಾಜಪೇಟೆಯ ಈದ್ಗಾ ಮೈದಾನ
ಚಾಮರಾಜಪೇಟೆಯ ಈದ್ಗಾ ಮೈದಾನ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದ ಒಡೆತನಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಇಂದು ಮಂಗಳವಾರ ಕರೆ ನೀಡಿದ್ದ ಚಾಮರಾಜಪೇಟೆ ಬಂದ್ ಬೆ ವ್ಯಾಪಕ ಬೆಂಬಲ ಸಿಕ್ಕಿದ್ದು ಬಹುತೇಕ ಯಶಸ್ವಿಯಾಗಿದೆ. 

ಬಹುತೇಕ ಮಂದಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಜನಸಂಚಾರ, ವಾಹನ ಸಂಚಾರ ವಿರಳವಾಗಿದೆ. ಚಾಮರಾಜಪೇಟೆ ಸುತ್ತಮುತ್ತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಜಾದ್ ನಗರ, ಗೋರಿಪಾಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. 

ಹಾಲು,ಮೆಡಿಕಲ್ ನಂತಹ ಅಗತ್ಯ ಸೇವೆಗಳು ಮಾತ್ರ ಬೆಳಗ್ಗೆ ತೆರೆದಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲಿ 457 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉನ್ನತಾಧಿಕಾರಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ: ಚಾಮರಾಜಪೇಟೆ ಮತ್ತು ಸುತ್ತಮುತ್ತಲಿನ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಹಿಂದೂಪರ ಸಂಘಟನೆಗಳ ಸದಸ್ಯರು ಚಾಮರಾಜಪೇಟೆ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಕಚೇರಿಗೆ ತೆರಳಿ ಬಂದ್‌ಗೆ ಬೆಂಬಲ ಕೋರಿದ್ದಾರೆ. ಜಮೀರ್‌ ಮನೆಯಲ್ಲಿ ಇಲ್ಲದ ಕಾರಣ ಆಪ್ತ ಸಹಾಯಕರಿಗೆ ಕರಪತ್ರ ನೀಡಲಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ.

ಇಂದು ಮಾತನಾಡಿದ ಚಾಮರಾಜಪೇಟೆಯ ಬಿಬಿಎಂಪಿ ಮಾಜಿ ಕೊರ್ಪೊರೇಟರ್ ಬಿ ವಿಗಣೇಶ್, ಈದ್ಗಾ ಮೈದಾನ ಚಾಮರಾಜಪೇಟೆ ಆಟದ ಮೈದಾನವಾಗಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಸುಮಾರು 30 ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಈ‌ ಹೋರಾಟಕ್ಕೆ ಎಲ್ಲರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೊಂದು ಭಾವನಾತ್ಮಕ ವಿಚಾರವಾಗಿದೆ. ನಾವು ಯಾರಿಗೂ ಜಾಗ ಬರೆದುಕೊಡಿ ಎಂದು ಹೇಳುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಮುಸ್ಲಿಮರು ಎರಡು ಬಾರಿ ಹಬ್ಬವನ್ನು ಇಲ್ಲಿ ಆಚರಣೆ ಮಾಡಲಿ ಹಾಗೂ ಉಳಿದ ಸಂದರ್ಭದಲ್ಲಿ ಆಟದ ಮೈದಾನವಾಗಿಯೇ ಉಳಿಯಲಿ ಹಾಗೂ ಜಯಚಾಮರಾಜೇಂದ್ರ ಆಟದ ಮೈದಾನ ಎಂದು ಹೆಸರಿಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ಆಟದ ಮೈದಾನದ ಸುತ್ತಮುತ್ತ ಸುಮಾರು ಇಪ್ಪತ್ತು ಶಾಲೆಗಳು ಇವೆ. ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಮಾಡಿ ಮುಂದಿನ ಹೊರಾಟ ರೂಪಿಸುತ್ತೇವೆ ಎಂದರು.

ವ್ಯಾಪಕ ಬಂದೋಬಸ್ತ್: ಈದ್ಗಾ ಮೈದಾನದ ಮಾಲೀಕತ್ವದ ವಿಚಾರವಾಗಿ ಸ್ಥಳೀಯ ಸಂಘಟನೆಗಳು ಇಂದು ಚಾಮರಾಜಪೇಟೆ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. 

ನಾಲ್ವರು ಸಹಾಯಕ ಪೊಲೀಸ್ ಆಯುಕ್ತರು, 12 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 30 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು, 410 ಎಎಸ್‌ಐಗಳು, ಹೆಡ್ ಕಾನ್‌ಸ್ಟೆಬಲ್‌ಗಳು, ಪೊಲೀಸ್ ಪೇದೆಗಳ ಜೊತೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ. ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.

ಬಂದ್‌ಗೆ ಪೊಲೀಸರು ಯಾವುದೇ ಅನುಮತಿ ನೀಡಿಲ್ಲ. ಅಂಗಡಿ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಿಸಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನಿನ್ನೆ ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com