ವಿಜಯಪುರ: ಯುವಕ ಆತ್ಮಹತ್ಯೆಗೆ ಶರಣು, ಸಾವಿಗೆ ಪಿಎಸ್ಐ ಕಾರಣ ಎಂದು ಆರೋಪ

ಕಳ್ಳತನದ ಆರೋಪ ಎದುರಿಸುತ್ತಿದ್ದ 25 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಸಾವಿಗೆ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಆತನ ಸಹೋದರನೇ ಕಾರಣ ಎಂದು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯಪುರ: ಹಣ ಕದ್ದ ಆರೋಪ ಎದುರಿಸುತ್ತಿದ್ದ 25 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಸಾವಿಗೆ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಆತನ ಸಹೋದರನೇ ಕಾರಣ ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಎಪಿಎಂಸಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಸೋಮನಾಥ ನಾಗಮೋತಿ(25) ಎಂದು ಗುರುತಿಸಲಾಗಿದ್ದು, ಖಾಸಗಿ ಕಾರು ಸರ್ವೀಸ್ ಕೇಂದ್ರದ ಉದ್ಯೋಗಿಯಾಗಿದ್ದರು.

ಪಿಎಸ್ಐ ಸೋಮೇಶ ಗೆಜ್ಜಿ ಅವರ ಸಹೋದರ ಸಚಿನ್ ಗೆಜ್ಜಿ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣ ಕದ್ದ ಆರೋಪವನ್ನು ಸೋಮನಾಥ ಎದುರಿಸುತ್ತಿದ್ದರು. ಈ ಸಂಬಂಧ ಠಾಣೆಗೆ ಪಿಎಸ್​ಐ ಸೋಮೇಶ್​ ಕರೆಯಿಸಿ ಹಲ್ಲೆ ಮಾಡಿ ಹಣ ವಾಪಸ್ ನೀಡುವಂತೆ ಹಿಂಸೆ ನೀಡಿದ್ದಾರೆ.

ಇದರಿಂದ ಮನನೊಂದು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಸೋಮನಾಥ ಕೆಲ ದಿನಗಳ ಹಿಂದೆ  ಫೇಸ್​ಬುಕ್ ಲೈವ್​ನಲ್ಲಿ ಹೇಳಿಕೊಂಡಿದ್ದ. ಇದೀಗ ಸೋಮನಾಥ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವ ಪತ್ತೆಯಾಗಿದೆ.

ಆತ್ಮಹತ್ಯೆಗೂ ಮುನ್ನ ಸೋಮನಾಥ್ ಫೇಸ್ ಬುಕ್ ಲೈವ್ ವೀಡಿಯೊದಲ್ಲಿ, "ನಾನು ಪಿಎಸ್ಐ ವಾಹನದಿಂದ ಯಾವುದೇ ಹಣವನ್ನು ಕದ್ದಿಲ್ಲ. ಪೊಲೀಸರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೇ ಹಲ್ಲೆ ನಡೆಸಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಪಿಎಸ್‌ಐ ಸೋಮೇಶ್ ಗೆಜ್ಜಿ, ಪಿಎಸ್‌ಐ ಅವರ ಸಹೋದರ ಸಚಿನ್ ಗೆಜ್ಜಿ ಮತ್ತು ಶಿವಗಿರಿ ಟೈರ್ಸ್ ಮಾಲೀಕ ಸಂತೋಷ ಡಿ ಮತ್ತು ರವಿ ಡಿ ಅವರೇ ಕಾರಣ ಎಂದು ಹೇಳಿದ್ದರು.

ಮೂಲಗಳ ಪ್ರಕಾರ, ಸೋಮನಾಥ್ ಅವರು ಕೆಲಸ ಮಾಡುತ್ತಿದ್ದ ಶಿವಗಿರಿ ಟೈರ್ಸ್‌ನಲ್ಲಿ ಸಚಿನ್ ಗೆಜ್ಜಿ ಅವರು ತಮ್ಮ ಕಾರು ಸರ್ವೀಸ್ ಗೆ ನೀಡಿದ್ದರು. ಈ ವೇಳೆ ಕಾರಿನಲ್ಲಿ 7.5 ಲಕ್ಷ ನಗದು ಇತ್ತು ಎನ್ನಲಾಗಿದೆ. ಆದರೆ ಸರ್ವೀಸ್ ನಂತರ 7.5 ಲಕ್ಷ ರೂ.ಗಳಲ್ಲಿ 1 ಲಕ್ಷ ರೂ. ನಾಪತ್ತೆಯಾಗಿದ್ದು, ಆ ಹಣವನ್ನು ಸೋಮನಾಥ್ ತೆಗೆದುಕೊಂಡಿದ್ದಾರೆ ಎಂದು ಪಿಎಸ್‌ಐ ಮತ್ತು ಅವರ ಸಹೋದರ ಆರೋಪಿಸಿದ್ದರು. ವಿಚಾರಣೆ ವೇಳೆ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com