ರಾಜ್ಯದ ವಿವಿಧೆಡೆ ಭಾರಿ ಮಳೆ: ಕೇಂದ್ರದಿಂದ ನೆರವು ಕೋರಲಾಗುವುದು- ಮುಖ್ಯಮಂತ್ರಿ ಬೊಮ್ಮಾಯಿ
ರಾಜ್ಯದ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹ ಸಾಕಷ್ಟು ಹಾನಿಯುಂಟು ಮಾಡಿರುವಂತೆಯೇ, ನಷ್ಟದ ಕುರಿತು ಸಮಗ್ರ ವರದಿ ಪಡೆದ ನಂತರ ಕೇಂದ್ರದಿಂದ ಹಣಕಾಸಿನ ನೆರವು ಕೋರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 17th July 2022 07:48 AM | Last Updated: 17th July 2022 12:52 PM | A+A A-

ಮಳೆಯಿಂದ ಸೇತುವೆ ಮುಳುಗಡೆಯಾಗಿರುವ ಚಿತ್ರ
ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹ ಸಾಕಷ್ಟು ಹಾನಿಯುಂಟು ಮಾಡಿರುವಂತೆಯೇ, ನಷ್ಟದ ಕುರಿತು ಸಮಗ್ರ ವರದಿ ಪಡೆದ ನಂತರ ಕೇಂದ್ರದಿಂದ ಹಣಕಾಸಿನ ನೆರವು ಕೋರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಸಾವಿರಾರು ಮನೆಗಳು ಕುಸಿದಿವೆ ಅಥವಾ ಭಾಗಶ: ಹಾನಿಗೊಂಡಿವೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಚರಣೆ ಕೈಗೊಂಡಿದ್ದು, ಹಾನಿಯಾದ ಮನೆಗಳಿಗೆ ಪರಿಹಾರ ವಿತರಿಸುತ್ತಿದೆ.
ಇದನ್ನೂ ಓದಿ: ಮಳೆಯಿಂದ ಬೆಳೆ ನಷ್ಟಕ್ಕೆ ನೀಡುವ ಪರಿಹಾರದ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮನೆ ಹಾಗೂ ಬೆಳೆ ಹಾನಿಗೆ ಪರಿಹಾರವನ್ನು ಹೆಚ್ಚಿಸಲಾಗಿದೆ. ಸಂಪೂರ್ಣವಾಗಿ ಹಾನಿಯಾಗಿರುವ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಮನೆ ಹಾನಿಗೊಳಗಾದ ಜನರಿಗೆ ಪರಿಷ್ಕೃತ ಪರಿಹಾರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಹಾನಿಗೊಳಗಾದ ಹೆಚ್ಚಿನ ಮನೆಗಳು ತಗ್ಗು ಪ್ರದೇಶಗಳಲ್ಲಿವೆ ಎಂದು ಹೇಳಿದ ಸಿಎಂ, ಸಂತ್ರಸ್ತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಮನೆಗಳು ಸಿಗುತ್ತವೆ ಎಂದು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯವು ಸುಮಾರು 18 ಲಕ್ಷ ಮನೆಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ಜಾರಿಯಾದಾಗ ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರವಾಹ ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ನದಿಗಳಲ್ಲಿ ಪ್ರವಾಹದ ವಿಚಾರವಾಗಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು. ನೀರು ಬಿಡುವಾಗ ಅಣೆಕಟ್ಟು ನಿರ್ವಹಣೆ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದರು.