ಇಂದು ಚಾಮುಂಡೇಶ್ವರಿ ವರ್ಧಂತಿ: ಪಲ್ಲಕ್ಕಿ ಉತ್ಸವದಲ್ಲಿ ಮೈಸೂರು ರಾಜವಂಶಸ್ಥರು, ಸಚಿವೆ ಶೋಭಾ ಕರಂದ್ಲಾಜೆ ಭಾಗಿ, ಸಿಎಂ ಆಗಮನ

ಆಷಾಢ ಮಾಸದಲ್ಲಿ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳಿಂದ ತಿಂಗಳಿಡೀ ಸಂಭ್ರಮ ಕಳೆಕಟ್ಟುತ್ತಿರುತ್ತದೆ. ಆಷಾಢ ಶುಕ್ರವಾರವಂತೂ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತರು ತುಂಬಿತುಳುಕುತ್ತಿರುತ್ತಾರೆ.
ಚಾಮುಂಡೇಶ್ವರಿ ದೇವಿ ವರ್ಧಂತಿ
ಚಾಮುಂಡೇಶ್ವರಿ ದೇವಿ ವರ್ಧಂತಿ

ಮೈಸೂರು: ಆಷಾಢ ಮಾಸದಲ್ಲಿ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳಿಂದ ತಿಂಗಳಿಡೀ ಸಂಭ್ರಮ ಕಳೆಕಟ್ಟುತ್ತಿರುತ್ತದೆ. ಆಷಾಢ ಶುಕ್ರವಾರವಂತೂ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತರು ತುಂಬಿತುಳುಕುತ್ತಿರುತ್ತಾರೆ.

ಇಂದು ಜುಲೈ 20ರಂದು ಚಾಮುಂಡೇಶ್ವರಿಯ ವರ್ಧಂತಿ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವರ್ಧಂತಿ ಸಂಭ್ರಮ, ಸಡಗರ ಮನೆ ಮಾಡಿದೆ. ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತಸಾಗರ ಕಾತುರದಿಂದ ಕಾಯುತ್ತಿದೆ. ರಾಜರ ಚಿನ್ನದ ಪಲ್ಲಕ್ಕಿಗೆ ಹೂವಿನ ಅಲಂಕಾರ ಮಾಡಲಾಗಿದೆ. 

ದೇವಸ್ಥಾನ ಸುತ್ತ ಮೆರವಣಿಗೆ ನಡೆಯಲಿದ್ದು ಪಕ್ಕವಾದ್ಯ ಮತ್ತಷ್ಟು ಶೋಭೆಯನ್ನು ತರುತ್ತದೆ. ಮೈಸೂರು ರಾಜ ಯದುವೀರ ಒಡೆಯರ್, ಅವರ ಪತ್ನಿ, ರಾಜಮಾತೆ ಪ್ರಮೋದಾ ದೇವಿ, ಮಾಜಿ ಸಚಿವ ಜಿ ಟಿ ದೇವೇಗೌಡ, ಶಾಸಕರು ಇಂದು ಬೆಳಗ್ಗೆಯೇ ದೇಗುಲಕ್ಕೆ ತೆರಳಿ ದೇವಿಯ ರಥ ಎಳೆಯುವ ಕಾರ್ಯಕ್ರಮದಲ್ಲಿ ಭಾಗಿಯಾದರು. 

ಇಂದು ಸಿಎಂ ಭಾಗಿ: ಕೆಆರ್ ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯಲ್ಲಿ ಭಾಗವಹಿಸಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿಸಲಿದ್ದಾರೆ. 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ: ಇಂದು ಬೆಳಗ್ಗೆಯೇ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಚಾಮುಂಡೇಶ್ವರಿ ದೇವಿಗೆ ಅರಸಿನ-ಕುಂಕುಮ, ಸೀರೆ, ಬಳೆ ಮತ್ತು ತಾಂಬೂಲ ಹರಕೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರು ಪ್ರತಿ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಅವರು ಬಂದು ದರ್ಶನ ಪಡೆಯುತ್ತಾರೆ. 

ದೇವಿ ದರ್ಶನ, ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಖಾಸಗಿಯಾಗಿ ನಡೆದಿದ್ದ ಆಷಾಢ ಮಾಸದ ಚಾಮುಂಡೇಶ್ವರಿ ದೇವಿಯ ವರ್ಧಂತಿ ಕಾರ್ಯಕ್ರಮ ಈ ವರ್ಷ ಅದ್ದೂರಿಯಾಗಿ ನೆರವೇರುತ್ತಿರುವುದು ಸಂತೋಷದ ವಿಷಯ. ಎಲ್ಲಾ ಕಡೆ ಅತಿವೃಷ್ಟಿ, ಅನಾವೃಷ್ಟಿಯಾಗದೆ ಸಮವೃಷ್ಟಿಯಾಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com