ಪಿಎಸ್ಐ ನೇಮಕಾತಿ ಹಗರಣ ಪೊಲೀಸರು, ಮಧ್ಯವರ್ತಿಗಳು, ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆ: ಪ್ರಾಸಿಕ್ಯೂಟರ್
ಪಿಎಸ್‌ಐ ನೇಮಕಾತಿ ಹಗರಣವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆಯೇ ಹೊರತು ಬೇರೇನೂ ಅಲ್ಲ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ವಿವರಿಸಿದ್ದಾರೆ.
Published: 21st July 2022 03:01 PM | Last Updated: 21st July 2022 05:11 PM | A+A A-

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತ ಪ್ರಮುಖ ಆರೋಪಿಗಳು
ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆಯೇ ಹೊರತು ಬೇರೇನೂ ಅಲ್ಲ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ವಿವರಿಸಿದ್ದಾರೆ.
ಕಳಂಕಿತ ಅಭ್ಯರ್ಥಿಗಳು 100 ಪ್ರಶ್ನೆಗಳಲ್ಲಿ ಕೇವಲ 16 ರಿಂದ 20 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದಾರೆ. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸೂಚಿಸಿದಂತೆ ಒಎಂಆರ್ ಶೀಟ್ ಗಳನ್ನು ತಿದ್ದುವ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಸಿಐಡಿಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ ಎಂದು ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಆರೋಪಿಗಳ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರ ಪೀಠದ ಮುಂದೆ ಈ ವಿಷಯವನ್ನು ಬಹಿರಂಗಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ವಿಎಸ್ ಹೆಗ್ಡೆ ಅವರು, ಈಗ ನ್ಯಾಯಾಂಗ ಬಂಧನದಲ್ಲಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿಯೇ ಅವರ ಹೇಳಿಕೆಯನ್ನು ದಾಖಲಿಸಲಾಗಿಲ್ಲ. ಆದ್ದರಿಂದ, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಂಬಂಧ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಲಾಗಿದೆ ಎಂದರು.
ಇದನ್ನು ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಅಮೃತ್ ಪೌಲ್ ಗೆ 14 ದಿನ ನ್ಯಾಯಾಂಗ ಬಂಧನ
ಅಮೃತ್ ಪೌಲ್ ಅವರ ಮೊಬೈಲ್ ಫೋನ್ ಅನ್ನು ಸಹ ಫಾರ್ಮ್ಯಾಟ್ ಮಾಡಲಾಗಿದೆ. ಆದ್ದರಿಂದ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ, ಇದು ಹಗರಣದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬಹುದು ಎಂದು ಅವರು ವಾದಿಸಿದರು.
ಕಾಲ್ ಡಿಟೇಲ್ಸ್ ರೆಕಾರ್ಡ್ಸ್(ಸಿಡಿಆರ್) ವಿಶ್ಲೇಷಣೆಯು ಅಭ್ಯರ್ಥಿಗಳು, ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಹಣದ ವಿಚಾರಣೆಯ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದೆ. ಇದರಿಂದ ಹಗಲು ರಾತ್ರಿ ಅಧ್ಯಯನ ಮಾಡಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು.
ವಾದ - ಪ್ರತಿ ವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ. ಜುಲೈ 22 ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.