ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇಬ್ಬರ ಬಂಧನ, 15ಕ್ಕೂ ಹೆಚ್ಚು ಮಂದಿಯ ವಿಚಾರಣೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಗುರುವಾರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 
ಹತ್ಯೆಯಾದ ಪ್ರವೀಣ್ ನೆಟ್ಟಾರು
ಹತ್ಯೆಯಾದ ಪ್ರವೀಣ್ ನೆಟ್ಟಾರು

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ (Praveen Nettaru murder case) ಸಂಬಂಧ ಗುರುವಾರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆ ಎಸ್​ಪಿ ಋಷಿಕೇಶ್ ಸೋನಾವಣೆ, ಆರೋಪಿಗಳು ಸವಣೂರು ಗ್ರಾಮದ 29 ವರ್ಷದ ಜಾಕೀರ್ ಮತ್ತು ಬೆಳ್ಳಾರೆ ಗ್ರಾಮದ 27 ವರ್ಷದ ಮೊಹಮ್ಮದ್ ಶಫೀಕ್ ಎಂದು ತಿಳಿಸಿದ್ದಾರೆ. ಇಬ್ಬರನ್ನೂ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣ ಸಂಬಂಧ ಈಗಾಗಲೇ 15 ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದರು.

ಪ್ರಕರಣದ ತನಿಖೆಗೆ ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು ತೀವ್ರ ತನಿಖೆ ನಡೆಸುತ್ತಿದೆ. ಕೇರಳ ಪೊಲೀಸರ ಜೊತೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಪ್ರವೀಣ್ ಅವರ ಕೋಳಿ ಅಂಗಡಿ ಬಳಿಯ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ಅದರಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ತೋರಿಸುತ್ತದೆ. ಕೊಲೆ ನಡೆಯುವ ಮುನ್ನ ಶಂಕಿತ ವ್ಯಕ್ತಿ ಸುಮಾರು 30 ನಿಮಿಷಗಳ ಕಾಲ ಬೈಕ್‌ನಲ್ಲಿ ರಸ್ತೆಬದಿಯಲ್ಲಿ ಕಾದು ಕೋಳಿ ಅಂಗಡಿಯತ್ತ ಹೋಗುತ್ತಿರುವ ದೃಶ್ಯಗಳು ದಾಖಲಾಗಿವೆ. 

ಶಾಸಕರಿಗೆ ಪ್ರವೀಣ್ ಪತ್ನಿ ತರಾಟೆ: ಇದೇ ವೇಳೆ ಪ್ರವೀಣ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಪಕ್ಷಕ್ಕಾಗಿ ದುಡಿದ ಪತಿಗೆ ಏನು ಸಿಕ್ಕಿತು ಎಂದು ಪ್ರವೀಣ್ ಪತ್ನಿ ನೂತನ್ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. "ಅವರು ಯಾವಾಗಲೂ ನಳಿನಣ್ಣ (ರಾಜ್ಯ ಬಿಜೆಪಿ ಅಧ್ಯಕ್ಷ), ಅಂಗಾರಣ್ಣ (ಮೀನುಗಾರಿಕೆ ಸಚಿವರು) ಮತ್ತು ಸಂಜೀವಣ್ಣ (ಶಾಸಕ) ಅವರ ಪರವಾಗಿ ಕೆಲಸ ಮಾಡುತ್ತಿದ್ದರು. ನಮಗೆ ಯಾವುದೇ ಪರಿಹಾರ ಬೇಡ, ಇಲ್ಲಿಯವರೆಗೆ ತಪ್ಪಿತಸ್ಥರನ್ನು ಏಕೆ ಬಂಧಿಸಿಲ್ಲ ಎಂದು ನೂತನ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 

ಬೆಳ್ಳಾರೆಯಲ್ಲಿ ನಿನ್ನೆ ಪ್ರವೀಣ್ ಅವರ ಅಂತ್ಯಕ್ರಿಯೆಯ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸರನ್ನು ವಿಎಚ್‌ಪಿ ಮತ್ತು ಬಜರಂಗದಳದ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಘಿಚಾರ್ಜ್‌ಗೆ ಆದೇಶ ನೀಡಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪ್ರವೀಣ್ ಹತ್ಯೆ ಘಟನೆಯ ಬಗ್ಗೆ ಎನ್‌ಐಎ ಅಥವಾ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 

ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಬಂಧಿತ ಆರೋಪಿಗಳಿಬ್ಬರು ಕೂಡ ಬೆಳ್ಳಾರೆಯವರಾಗಿದ್ದಾರೆ. ಬಂಧಿತರಿಗಿರುವ ಸಂಘಟನೆಗಳ ಲಿಂಕ್​ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈವರೆಗೆ ಸುಮಾರು 21 ಜನರನ್ನು ವಶಕ್ಕೆ ಪಡೆದಿದ್ದೇವೆ. ಇದರಲ್ಲಿ ಎಸ್‌ಡಿಫಿಐ, ಪಿಎಫ್ಐ‌ ಸೇರಿದಂತೆ ಹಲವು ಶಂಕಿತರು ಒಳಗೊಂಡಿದ್ದಾರೆ. ಇದು ತುಂಬಾ ಭೀಕರ ಹತ್ಯೆಯಾಗಿದ್ದು ಸೂಕ್ಷ್ಮ ವಿಚಾರವೂ ಆಗಿದೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನ ಯಾರನ್ನ ಬಿಡುವುದಿಲ್ಲ. ಹಾಸನ ಎಸ್​ಪಿ ಹರಿರಾಮ್ ಶಂಕರ್, ಡಿಸಿಪಿ ಅನುಚೇತ್ ಅವರನ್ನು ಕರೆಸಿದ್ದೇವೆ ಎಂದರು. 

ಇಂದು ಸಿಎಂ ಭೇಟಿ: ಘಟನೆ ನಡೆದಿರುವ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಅವರ ಮನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಲಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. 

ಎನ್ಐಗೆ ವಹಿಸಿ: ಮಾಧ್ಯಮಗಳ ಮುಂದೆ ಇಂದು ಮಾತನಾಡಿರುವ ಪ್ರವೀಣ್ ನೆಟ್ಟಾರು ಪತ್ನಿ ನೂತನ ತಮ್ಮ ಪತಿಯ ಹತ್ಯೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ಕೊಡುವುದನ್ನು ನಾನು ಕಣ್ಣಾರೆ ನೋಡಬೇಕು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡ (NIA)ಕ್ಕೆ ವಹಿಸಿ ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com