
ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದರು ಎನ್ನಲಾದ ಬೆಳ್ಳಾರೆ ಪಿಎಸ್ಐ ರುಕ್ಮ ನಾಯಕ್ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಐ ಜಂಬೂರಾಜ್ ಮಹಾಜನ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ಎತ್ತಂಗಡಿ ಮಾಡಿದೆ. ಸುಬ್ರಹ್ಮಣ್ಯ ಮತ್ತು ಬೆಳ್ಳಾರೆ ಠಾಣೆಗಳಿಗೆ ಹೊಸ ಪಿಎಸ್ಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರವೀಣ್ ನೆಟ್ಟಾರು ಅಂತಿಮಯಾತ್ರೆ ವೇಳೆ ಲಾಠಿಚಾರ್ಜ್ ನಡೆದಿತ್ತು. ಲಾಠಿಚಾರ್ಜ್‌ನಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿತ್ತು. ಈ ಹಿನ್ನೆಯಲ್ಲಿ ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗೂ ಸುಬ್ರಮಣ್ಯ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ರನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ.
ವಿಟ್ಲ ಠಾಣೆಯ ಪಿಎಸ್ಐ ಮಂಜುನಾಥ್ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ಮತ್ತು ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ಸುಹಾಸ್ ಆರ್ ಅವರನ್ನು ಬೆಳ್ಳಾರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ದೇವಜ್ಯೋತಿ ರೇ ಅವರು ಆದೇಶ ಹೊರಡಿಸಿದ್ದಾರೆ.
ನೆಟ್ಟಾರು ಪಾರ್ಥಿವ ಶರೀರದ ಮೆರವಣಿಗೆ ವೇಳೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತರೊಬ್ಬರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಈ ಹಿನ್ನೆಲೆ ಬಂದೋಬಸ್ತ್ನಲ್ಲಿದ ಬೆಳ್ಳಾರೆ ಠಾಣೆ ಮತ್ತು ಸುಬ್ರಹ್ಮಣ್ಯ ಪಿಎಸ್ಐ ಹಾಗೂ ಇತರ ಪೊಲೀಸರನ್ನು ಅಮಾನತುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು.
Advertisement