ಚಿತ್ರದುರ್ಗ: ಇವರು ದೃಷ್ಟಿಹೀನರು, ಹಾಗೆಂದು ಕೈಕಟ್ಟಿ ಕೂತಿಲ್ಲ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಅಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ.
ಮೊದಲು ಮೂವರು ಗ್ರಾಮ ಪಂಚಾಯತ್ ಪಿಡಿಒಗಳನ್ನು ಸಂಪರ್ಕಿಸಿ, ತೊಟ್ಟಿಯ ಹೂಳು ತೆಗೆಯುವ ಕೆಲಸದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡು ಬಂದರು, ದ್ವಿತೀಯ ಪಿಯುಸಿಯವರೆಗೆ ವ್ಯಾಸಂಗ ಮಾಡಿರುವ ಕಲಾವತಿ ಮತ್ತು ಅಜಯ್ ಹಾಗೂ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಎಸ್ ಆಶಾ ಮನೆ ನಿರ್ವಹಣೆಗೆ ಏನು ಮಾಡಬೇಕೆಂದು ತೋಚದೆ ಪೋಷಕರಾದ ಜಿ ಶೇಖರಪ್ಪ ಮತ್ತು ತಾಯಿ ರಾಮಕ್ಕ ಅವರನ್ನು ಹೇಗೆ ನೋಡಿಕೊಳ್ಳುವುದೆಂದು ಚಿಂತೆಗೀಡಾಗಿದ್ದರು. ಜಿಲ್ಲಾ ಪಂಚಾಯತ್ ಮೊರೆ ಹೋದರು. ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ನಂದಿನಿ ದೇವಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಈ ಮೂವರು ವಿಶೇಷಚೇತನರಿಗೆ ಜಾಬ್ ಕಾರ್ಡ್ ಹಾಗೂ 100 ದಿನಗಳ ಉದ್ಯೋಗವನ್ನು ನೀಡಿದರು.
ನರೇಗಾ ಯೋಜನೆಯಡಿ ಉದ್ಯೋಗ ನೀಡುವಾಗ ನೌಕರರ ದೃಷ್ಟಿಯನ್ನು ಪರಿಗಣಿಸಲಾಗುತ್ತದೆ. ಸಂಪೂರ್ಣ ಅಂಧರಾಗಿರುವ ಅಜಯ್ ಮತ್ತು ಎಸ್ ಕಲಾವತಿ ಮಣ್ಣಿನ ಬುಟ್ಟಿಗಳನ್ನು ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ದೃಷ್ಟಿ ಮಂದವಾಗಿರುವ ಸಹೋದರಿ ಎಸ್ ಆಶಾ ಇತರ ಕೂಲಿ ಕಾರ್ಮಿಕರಿಗೆ ಕುಡಿಯುವ ನೀರನ್ನು ವಿತರಿಸುತ್ತಿದ್ದಾರೆ. ದಿನಕ್ಕೆ 309 ರೂಪಾಯಿ ಕೂಲಿ ಪಡೆಯುತ್ತಾರೆ.
ಇಲ್ಲಿಯವರೆಗೆ ನರೇಗಾ ಯೋಜನೆಯಡಿಯಲ್ಲಿ 2,791 ವಿಶೇಷಚೇತನರು ನೋಂದಾಯಿಸಿಕೊಂಡಿದ್ದಾರೆ, ಅವರಲ್ಲಿ 186 ಜನರು ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. 2,650 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ.
ಸಮಾಜಕ್ಕೆ ಹೊರೆಯಾಗಿ ಬದುಕಬಾರದು. ಹೀಗಾಗಿ ನಾನು ಮತ್ತು ನನ್ನ ಸೋದರಿ ಗ್ರಾಮ ಪಂಚಾಯತ್ ಗೆ ಹೋಗಿ ಉದ್ಯೋಗ ನೀಡುವಂತೆ ಕೇಳಿಕೊಂಡೆವು. ನಮಗೆ ಅವರು ಜಾಬ್ ಕಾರ್ಡ್ ಕೊಟ್ಟು ಉದ್ಯೋಗ ನೀಡಿದರು. ಇಂದು ನಾವು ಗೌರವಯುತ ಜೀವನ ನಡೆಸುತ್ತೇವೆ ಎಂದರು.
Advertisement