ಹುಬ್ಬಳ್ಳಿ: ಕಿಮ್ಸ್ ನಲ್ಲಿ ತಾಯಿ ಕೈಯಲ್ಲಿದ್ದ 40 ದಿನದ ಹೆಣ್ಣು ಮಗು ಅಪಹರಣ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಾರ್ಡ್‌ನಲ್ಲಿ 40 ದಿನದ ಹೆಣ್ಣು ಮಗುವನ್ನು ತಾಯಿಯ ಕೈಯಿಂದ ಕಿತ್ತುಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
Published: 13th June 2022 08:41 PM | Last Updated: 14th June 2022 01:47 PM | A+A A-

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವ ಪೊಲೀಸ್ ಸಿಬ್ಬಂದಿ
ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಾರ್ಡ್‌ನಲ್ಲಿ 40 ದಿನದ ಹೆಣ್ಣು ಮಗುವನ್ನು ತಾಯಿಯ ಕೈಯಿಂದ ಕಿತ್ತುಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿಯಾಗಿರುವ ತಾಯಿಯ ಹೇಳಿಕೆ ಪ್ರಕಾರ, ಮಧ್ಯವಯಸ್ಕನೊಬ್ಬ ಕಪ್ಪು ಟೀ ಶರ್ಟ್ ಧರಿಸಿ ವಾರ್ಡ್‌ನೊಳಗೆ ನುಗ್ಗಿ ಆಕೆಯ ಕೈಯಿಂದ ಮಗುವನ್ನು ಕಿತ್ತುಕೊಂಡಿದ್ದಾನೆ. ತಾಯಿ ಸಹಾಯಕ್ಕಾಗಿ ಕರೆ ಮಾಡುವ ಮುನ್ನ ಅಪಹರಣಕಾರನು ಮಗುವನ್ನು ತೆಗೆದುಕೊಂಡು ಹೊರಗೆ ಹೋಗಿದ್ದಾನೆ. ನಂತರ ತಾಯಿ ಮತ್ತು ಸಂಬಂಧಿಕರು ಆಸ್ಪತ್ರೆಯಲ್ಲಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
''ತಾಯಿ ಉಮ್ಮೆ ಝೈನಾಬ್ ಹುಸೇನಸಾಬ್ ಶೇಖ್ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತನ್ನ ಹೆಣ್ಣು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ, ನಾನು ನನ್ನ ಅಳುತ್ತಿರುವ ಮಗುವನ್ನು ಸಾಂತ್ವನ ಮಾಡಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ನನ್ನ ಬಳಿಗೆ ಬಂದ ವ್ಯಕ್ತಿ ನನ್ನ ಮಗುವನ್ನು ಕಿತ್ತುಕೊಂಡು ಹೋದ. ನಾನು ಎದ್ದು ಅವನ ಹಿಂದೆ ಓಡಲು ಪ್ರಯತ್ನಿಸಿದೆ. ಆದರೆ ಅವನು ವೇಗವಾಗಿ ನಡೆದು ಕಣ್ಮರೆಯಾದನು. ನಾನು ಸಹಾಯಕ್ಕಾಗಿ ಕೂಗಿದೆ. ಆದರೆ ಯಾರೂ ಇರಲಿಲ್ಲ" ಎಂದು ತಾಯಿ ಹೇಳಿದ್ದಾರೆ.
ಇದನ್ನು ಓದಿ: ವಿಜಯಪುರ ಜಿಲ್ಲಾಸ್ಪತ್ರೆಯಿಂದ ಮಾರಾಟವಾಗಿದ್ದ ಮಗು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಪತ್ತೆ!
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾನಗರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರು ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಿಬ್ಬಂದಿ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಪರಾಧದ ಹಿಂದೆ ಒಬ್ಬರೇ ಇದ್ದಾರೋ ಅಥವಾ ತಂಡವಿದೆಯೇ ಎಂಬುದು ಇನ್ನೂ ಪತ್ತೆಯಾಗಿಲ್ಲ. ಅಪಹರಣಕಾರರನ್ನು ಗುರುತಿಸಲು ನಾವು ಎರಡು ತಂಡಗಳನ್ನು ರಚಿಸಿದ್ದೇವೆ. ತಂಡಗಳು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.