
ಸಾಂದರ್ಭಿಕ ಚಿತ್ರ
ಹಾವೇರಿ: ಶಾಸಕ ನೆರವು ಓಲೇಕಾರ್ ಕುಟುಂಬ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕಬ್ಬೂರು (65), ಮತ್ತು ಹನುಮಂತಪ್ಪ ಬಡಿಗೇರ (41) ಆತ್ಮಹತ್ಯೆಗೆ ಯತ್ನಿಸಿದವರು. ಇವರು ತಮ್ಮ ಜಮೀನಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ಅಸ್ವಸ್ಥರಾಗಿದ್ದ ಇವರಿಗೆ ಬ್ಯಾಡಗಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶಿಡೇನೂರು ಗ್ರಾಮದಲ್ಲಿ 29 ಕುಟುಂಬಗಳು ಅಕ್ರಮ ಸಕ್ರಮ ಜಮೀನಿನಲ್ಲಿ ಸಾಗುವಳಿ ಮಾಡುತ್ತಿವೆ. ಆದರೆ ತಾವು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಪ್ರತಿ ಕುಟುಂಬವೂ ತಲಾ 15 ಗುಂಟೆ ಜಮೀನು ಬಿಟ್ಟುಕೊಡಬೇಕು ಎಂದು ಶಾಸಕ ನೆಹರು ಓಲೇಕಾರ್ ಮತ್ತು ಅವರ ಮಕ್ಕಳು ಒತ್ತಾಯಿಸಿದ್ದಾರೆ. ಆಸ್ಪತ್ರೆ ಎದುರು ಜಮಾಯಿಸಿದ ಗ್ರಾಮಸ್ಥರು ಓಲೇಕಾರ ವಿರುದ್ಧ ಘೋಷಣೆ ಕೂಗಿ ಶಾಸಕ ಹಾಗೂ ಅವರ ಪುತ್ರ ಮಂಜುನಾಥ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು
ಜಮೀನು ಬಿಟ್ಟುಕೊಡದಿದ್ದಕ್ಕೆ ಗ್ರಾಮದಲ್ಲಿನ ಜನರು ಕೃಷಿಗೆ ಸಹಕಾರ ಕೊಡದಂತೆ ಮಾಡಿದ್ದಾರೆ, ನೆಹರು ಓಲೇಕಾರ ಕುಟುಂಬ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಶೇಖರಗೌಡ ಪಾಟೀಲ ಎಂಬುವರು ದಲಿತ ಕುಟುಂಬಗಳಿಗೆ ನೀಡಿರುವ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಮಂಜುನಾಥ್ ಅವರಿಗೆ ಬೆಂಬಲ ನೀಡಿದ್ದು, 15 ಗುಂಟೆ ಜಮೀನು ನೀಡುವಂತೆ ದಲಿತ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ ಶಾಸಕ ನೆಹರೂ ಓಲೇಕಾರ ಆರೋಪವನ್ನು ನಿರಾಕರಿಸಿದರು.