ಶಿರಸಿ: ಶಾಲ್ಮಲಾ ನದಿಯಲ್ಲಿರುವ ಐತಿಹಾಸಿಕ ಸಹಸ್ರ ಲಿಂಗಗಳೇ ಕಣ್ಮರೆ!

ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು.‌ ಶಾಲ್ಮಲಾ ನದಿಯಲ್ಲಿರುವ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ, ಇತ್ತೀಚೆಗೆ ಸಹಸ್ರಲಿಂಗ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆಯಾಗುತ್ತಿವೆ.
ಸಹಸ್ರ ಲಿಂಗ
ಸಹಸ್ರ ಲಿಂಗ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು.‌ ಶಾಲ್ಮಲಾ ನದಿಯಲ್ಲಿರುವ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ, ಇತ್ತೀಚೆಗೆ ಸಹಸ್ರಲಿಂಗ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆಯಾಗುತ್ತಿವೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಸಹಸ್ರಲಿಂಗ ಕ್ಷೇತ್ರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗಗಳಿದ್ದವು. ಇವುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಕಾರಣ ಹೆಚ್ಚು ಆಕರ್ಷಕವಾಗಿತ್ತು‌. ಈ ಶಾಲ್ಮಲಾ ನದಿ ಒಟ್ಟು 290 ಕಿ.ಮೀ. ಹರಿಯುತ್ತಿದ್ದು, ಈ ನದಿಯ ಒಳಭಾಗದಲ್ಲೂ ಸಾಕಷ್ಟು ಲಿಂಗಗಳಿವೆ. ಆದರೆ, ಇತ್ತೀಚೆಗೆ ಈ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದ ಶಿವಲಿಂಗಗಳ ಸಂಖ್ಯೆ ವಿವಿಧ ಕಾರಣಗಳಿಂದ ಭಾರೀ ಕಡಿಮೆಯಾಗತೊಡಗಿವೆ.

ಮಳೆಗಾಲದಲ್ಲಿ ರಭಸವಾಗಿ ಹರಿಯುವ ಶಾಲ್ಮಲಾ ನದಿ ಹಲವು ಬಂಡೆಕಲ್ಲುಗಳನ್ನು ಕೊಚ್ಚಿಕೊಂಡು ಸಾಗಿದ್ದರಿಂದ ಹಾಗೂ ನೀರಿನ ರಭಸಕ್ಕೆ ಸವೆದು ಹೋಗಿರುವುದರಿದ ಇಲ್ಲಿನ ಲಿಂಗಗಳು ಕಣ್ಮರೆಯಾಗುತ್ತಿವೆ. ಇಲ್ಲಿಗೆ ಭೇಟಿ ನೀಡುವ ಕೆಲವು ಕಿಡಿಗೇಡಿ ಪ್ರವಾಸಿಗರು ಕೂಡಾ ದಾಂಧಲೆ ಎಬ್ಬಿಸಿ, ಮೋಜಿಗಾಗಿ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಇನ್ನು ಸಣ್ಣ ಸಣ್ಣ ಲಿಂಗಗಳನ್ನು ಕೆಲವರು ಕೊಂಡೊಯ್ದಿರುವುದಾಗಿಯೂ ಮಾಹಿತಿಗಳಿವೆ.

ಹದಿನೈದನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬ ಪ್ರತೀತಿಯಿದೆ. ಅಂದಿನಿಂದ ಇಂದಿನವರೆಗೂ ಈ ಸ್ಥಳಕ್ಕೆ ಪ್ರತೀ ವರ್ಷ ಬೇಸಿಗೆಗಾಲದ ಸಮಯದಲ್ಲಿ ಶಿವರಾತ್ರಿ ಹಾಗೂ ಸಂಕ್ರಾಂತಿಯಂದು ಹದಿನೈದರಿಂದ ಇಪ್ಪತ್ತು ಸಾವಿರ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡಿ ಲಿಂಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಸುಮಾರು 500 ವರ್ಷಗಳಷ್ಟು ಹಳೇಯ ಲಿಂಗಗಳಾಗಿವೆ.

ಇಲ್ಲಿ ಮೇಲ್ಗಡೆ 8 ಕಿ.ಮೀ. ಹಾಗೂ ಕೆಳಗಡೆ 8 ಕಿ.ಮೀ.‌ ಸೇರಿ ಒಟ್ಟು 16 ಕಿ.ಮೀ. ವ್ಯಾಪ್ತಿಯಲ್ಲಿ ಸಹಸ್ರಲಿಂಗಗಳು ವ್ಯಾಪಿಸಿವೆ. ಸದ್ಯ ಲಿಂಗಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಇದರತ್ತ ಗಮನ ಹರಿಸಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮಹಾ ಶಿವರಾತ್ರಿ ಸಮಯದಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಭೈರುಂಬೆ ಗ್ರಾಮ ಪಂಚಾಯಿತಿಯಿಂದ ಸಹಸ್ರಲಿಂಗ ಸ್ಥಳ ನಿರ್ವಹಿಸಲಾಗುತ್ತದೆ. ಗಾರ್ಡ್ ನೇಮಕ ಮಾಡಬಹದು ಅಷ್ಟೇ. ಅಗತ್ಯವಿದ್ದರೆ ನಾವು ಅವುಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಹೇಳಿದರು. ಇನ್ನು ಈ ಬಗ್ಗೆ ಪರಿಶೀಲಿಸುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com