ಮೈಶುಗರ್ ಕಾರ್ಖಾನೆ ಆಗಸ್ಟ್‌ನಲ್ಲಿ ಪುನರಾರಂಭ: ಸಚಿವ ನಾರಾಯಣಗೌಡ
ಜುಲೈ ಅಂತ್ಯದೊಳಗೆ ಮೈಶುಗರ್ ಕಾರ್ಖಾನೆ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published: 29th June 2022 11:03 PM | Last Updated: 30th June 2022 01:42 PM | A+A A-

ಮೈಶುಗರ್ ಕಾರ್ಖಾನೆಗೆ ಭೇಟಿ ನೀಡಿ ದುರಸ್ತಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು.
ಮಂಡ್ಯ: ಜುಲೈ ಅಂತ್ಯದೊಳಗೆ ಮೈಶುಗರ್ ಕಾರ್ಖಾನೆ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರೊಂದಿಗೆ ಮೈಶುಗರ್ ಕಾರ್ಖಾನೆಗೆ ಭೇಟಿ ನೀಡಿ ದುರಸ್ತಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು.
ಮೈಶುಗರ್ ಕಾರ್ಖಾನೆ ಮಂಡ್ಯ ರೈತರ ಜೀವನಾಡಿ.. ಆದಷ್ಟು ಬೇಗ ಕಾರ್ಖಾನೆ ಆರಂಭವಾಗಿ ಕಬ್ಬು ಅರೆಯಬೇಕು ಎಂಬುಂದು ಮಂಡ್ಯ ಜಿಲ್ಲೆಯ ರೈತರ ಕನಸು.. ಹಾಗಾಗಿ ತ್ವರಿತಗತಿಯಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಿ, ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ನಮ್ಮ ಸರ್ಕಾರದ ಇಚ್ಛಾಶಕ್ತಿಯೇ ಕಾರಣ. ಅದಕ್ಕೆ ಅಗತ್ಯವಿರುವ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಕಬ್ಬು ಅರೆಯುವುದನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗಾಗಿ, ಜುಲೈ ಅಂತ್ಯದೊಳಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.