ತುಮಕೂರು: ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಸಾವು!

ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಜೀವ ಕಳೆದುಕೊಂಡಿದ್ದಾರೆ. 
ತುಮಕೂರು ಜಿಲ್ಲಾ ಆಸ್ಪತ್ರೆ
ತುಮಕೂರು ಜಿಲ್ಲಾ ಆಸ್ಪತ್ರೆ

ತುಮಕೂರು: ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಜೀವ ಕಳೆದುಕೊಂಡಿದ್ದಾರೆ. 

ಅವಳಿ ಮಕ್ಕಳು ಹಾಗೂ ತಾಯಿ ಮೃತ ದುರ್ದೈವಿಗಳಾಗಿದ್ದು, ಜಿಲ್ಲೆಯ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ವಾಸವಿದ್ದ ಅನಾಥ ಬಾಣಂತಿ ಮಹಿಳೆಯನ್ನು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಆಟೋ ಮೂಲಕ ಕಳಿಸಿದ್ದರು. ಮಹಿಳೆಯೊಂದಿಗೆ ಪಕ್ಕದ ಮನೆಯ ವೃದ್ಧೆಯೊಬ್ಬರು ತೆರಳಿದ್ದರು ಎಂದು ತಿಳಿದುಬಂದಿದೆ.
 
ಆದರೆ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎಂಬ ಕಾರಣ ನೀಡಿ, ಆಸ್ಪತ್ರೆಯಿಂದ ವಾಪಸ್‌ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷ್ಯ ಮಾಡಿದ್ದರಿಂದ ಮಕ್ಕಳು ಹಾಗೂ ತಾಯಿ ಮೂವರೂ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೇ ತಾವು ಚಿಕಿತ್ಸೆ ಕೊಡುವ ಬದಲು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಮಹಿಳೆಗೆ ಹೇಳಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತಮ್ಮ ಬಳಿ ಹಣ ಇಲ್ಲದ ಕಾರಣ ಮಹಿಳೆ ಮನೆಗೆ ವಾಪಸ್‌ ಬಂದಿದ್ದರು. ಈ ಘಟನೆ ಬಳಿಕ ಬೆಳಗ್ಗಿನ ಜಾವ ಮಹಿಳೆ ಅನಾರೋಗ್ಯದ ನಡುವೆ ಒಂದು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಬಳಿಕ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ 3 ಜೀವಗಳು ಬಲಿಯಾಗಿವೆ. 

ಮೃತ ಮಹಿಳೆಯನ್ನು ಕಸ್ತೂರಿ ಎಂದು ಗುರುತಿಸಲಾಗಿದ್ದು,  ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು ಎಂದು ಹೇಳಲಾಗುತ್ತಿದೆ. ಕಸ್ತೂರಿ ಆಸ್ಪತ್ರೆಗೆ ದಾಖಲಾಗಬೇಕಾದರೆ,  ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಆದರೆ, ಅವರ ಬಳಿ ತಾಯಿ ಕಾರ್ಡ್‌ ಇರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.  ಕಸ್ತೂರಿ ತಮಿಳುನಾಡು ಮೂಲದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು. ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು DHO ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥ ವೈದ್ಯರನ್ನು ಅಮಾನತು ಮಾಡುವಂತೆಯೂ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಜುನಾಥ್, ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com