ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿ ಬಿಜೆಪಿ ದೇಶದ್ರೋಹಿಗಳನ್ನು ಬೆಳೆಸುತ್ತಿದೆ: ಮುತಾಲಿಕ್

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ಬಾರಿಗೆ ಆಚರಣೆಗೆ ತಂದ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೊಟ್ಟಿದ್ದು ಇಂದು ನವೆಂಬರ್ 10ರಂದು ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ, ಬಲಚಿತ್ರದಲ್ಲಿ ಪ್ರಮೋದ್ ಮುತಾಲಿಕ್ ಸಂಗ್ರಹ ಚಿತ್ರ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ, ಬಲಚಿತ್ರದಲ್ಲಿ ಪ್ರಮೋದ್ ಮುತಾಲಿಕ್ ಸಂಗ್ರಹ ಚಿತ್ರ

ಹುಬ್ಬಳ್ಳಿ: ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ಬಾರಿಗೆ ಆಚರಣೆಗೆ ತಂದ ಟಿಪ್ಪು ಜಯಂತಿ(Tippu Jayanti) ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೊಟ್ಟಿದ್ದು ಇಂದು ನವೆಂಬರ್ 10ರಂದು ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.

AIMIM ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಟಿಪ್ಪು ಜಯಂತಿ ಆಚರಿಸಲಾಗಿದೆ. AIMIM ಕಾರ್ಯಕರ್ತರು ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಟಿಪ್ಪು ಸುಲ್ತಾನ್​​ ಪರ ಘೋಷಣೆ ಕೂಗಿ ಟಿಪ್ಪು ಜಯಂತಿ ಆಚರಿಸಿದರು. ಪೊಲೀಸ್​ ಸರ್ಪಗಾವಲಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ನೆರವೇರಿತು. 

ಮಹಾನಗರ ಪಾಲಿಕೆ ಹಲವು ಷರತ್ತುಗಳ ವಿಧಿಸಿ ಆಚರಣೆಗೆ ಅನುಮತಿ ನೀಡಿತ್ತು. 10 ಸಾವಿರ ರೂಪಾಯಿ ಪಾವತಿಸಬೇಕು, ಟಿಪ್ಪು ಸುಲ್ತಾನ್ ಫೋಟೋ ಬಿಟ್ಟು ಬೇರೆ ಫೋಟೋ ಹಾಕದಂತೆ ಷರತ್ತು ನೀಡಿತ್ತು. ಅದರಂತೆಯೇ AIMIM ಸಂಚಾಲಕ ವಿಜಯ್ ಗುಂಟ್ರಾಳ್​ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ನೆರವೇರಿದೆ. ಕಾರ್ಯಕ್ರಮದಲ್ಲಿ ಅಂಜುಮನ್ ಕಮೀಟಿ ಸದಸ್ಯರು, ಮುಸ್ಲಿಂ ಭಾಂದವರು ಭಾಗಿಯಾಗಿದ್ದು ಟಿಪ್ಪು ಸುಲ್ತಾನ್ ಪರ ಜೈಘೋಷ ಕೂಗಿ ಸಂಭ್ರಮಿಸಿದರು. ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸ್ ಭದ್ರತೆ ನೀಡಲಾಗಿತ್ತು.

ಪ್ರಮೋದ್​ ಮುತಾಲಿಕ್ ಪೊಲೀಸರ ವಶ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ಪ್ರತಿಭಟನೆ ನಡೆಸಿದ್ದು ಚೆನ್ನಮ್ಮ ವೃತ್ತದ ಬಳಿ ಪ್ರಮೋದ್​ ಮುತಾಲಿಕ್ ಸೇರಿದಂತೆ ಹಲವು ಕಾರ್ಯಕರ್ತರು ಆಗಮಿಸಿದರು.ಆದರೆ ಪೊಲೀಸರು ಅವರನ್ನು ಸುತ್ತುವರೆದು ಮುಂದಕ್ಕೆ ಹೋಗಲು ಬಿಡಲಿಲ್ಲ. 

ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದು ತಪ್ಪು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಟಿಪ್ಪು ಜಯಂತಿ ರದ್ದು ಮಾಡಿ ಈಗ ಅವರೇ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದಾರೆ. ಚುನಾವಣೆಗೋಸ್ಕರ ಅಲ್ಪಸಂಖ್ಯಾತರನ್ನು ಓಲೈಸಲು ಈ ರೀತಿ ಬಿಜೆಪಿಯವರು ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಬೇರೆ ಮಹಾಪುರುಷರ ಜೊತೆ ಟಿಪ್ಪು ಹೋಲಿಕೆ ಸರಿಯಲ್ಲ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ, ಕನಕ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಕೋರುತ್ತೇನೆ ಎಂದಿದ್ದಾರೆ.

ಬಿಜೆಪಿಗೆ ಟಿಪ್ಪು ಜಯಂತಿ ಆಚರಣೆಯನ್ನು ತಡೆಯಬಹುದಾಗಿತ್ತು. ರಾಜಕೀಯ ಲಾಭಕೋಸ್ಕರ ಈ ರೀತಿ ಮಾಡುತ್ತಿದ್ದಾರೆ. ಎಐಎಂಐಎಂ ಎಂಬುದು ಒಂದು ದೇಶದ್ರೋಹಿ ಪಕ್ಷ. ಅದಕ್ಕೆ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟು ಕಾಂಗ್ರೆಸ್ ನ ಓಟು ವಿಭಜಿಸಿ ತಮಗೆ ಲಾಭವಾಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಈ ಮೂಲಕ ಬಿಜೆಪಿ ಭಯೋತ್ಪಾದಕರನ್ನು, ದೇಶದ್ರೋಹಿಗಳನ್ನು ಬೆಳೆಸುತ್ತಿದೆ.ಈ ನಿಲುವು ಸರಿಯಲ್ಲ, ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com