ಮತದಾರರ ಮಾಹಿತಿ ಕಳ್ಳತನ ಆರೋಪದ ಬಗ್ಗೆ ತನಿಖೆಗೆ ಆದೇಶ: ಮುಖ್ಯ ಚುನಾವಣಾ ಅಧಿಕಾರಿ
ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಹೇಳಿದ್ದಾರೆ.
"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಮಿಷನರ್ ಅವರಿಗೆ ಈ ಬಗ್ಗೆ ಕೆಲ ಮಾಹಿತಿ ಇದೆ. ಮಾಹಿತಿ ಕಳ್ಳತನದ ಬಗ್ಗೆ ನಮಗೆ ಆತಂಕವಿದೆ ಮತ್ತು ಅದನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಅಂತಿಮವಾಗಿ, ಪೊಲೀಸ್ ತನಿಖೆ ಮತ್ತು ನಮ್ಮ ವಿಭಾಗೀಯ ಆಯುಕ್ತರ ವಿಚಾರಣೆ ನಂತರ ಸತ್ಯಾಂಶ ಹೊರಬರಲಿದೆ" ಎಂದು ಮೀನಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ('ಚಿಲುಮೆ ಟ್ರಸ್ಟ್') ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳ(ಬಿಎಲ್‌ಒ) ಸೋಗು ಹಾಕಿ ನಕಲಿ ಗುರುತಿನ ಚೀಟಿ ನೀಡಿ, ಅನೇಕ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಾಗರಿಕ ಸಂಸ್ಥೆ ನಿಯೋಜಿಸಿದ ಖಾಸಗಿ ಟ್ರಸ್ಟ್ ಮತದಾರರ ಹೆಸರು, ಮಾತೃಭಾಷೆ, ಲಿಂಗ, ಧರ್ಮ, ಜಾತಿ, ಮತದಾರರ ಗುರುತಿನ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಮುಂತಾದ ವಿವರಗಳನ್ನು ಸಂಗ್ರಹಿಸಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.
ಮತದಾರರ ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಲು ಮೀನಾ ನಿರಾಕರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ