ಗಾಂಧಿ ಜಯಂತಿ: ನಂಜನಗೂಡಿನ ಬದನವಾಳು ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ಭೇಟಿ
ಮೈಸೂರು: ಗಾಂಧಿ ಜಯಂತಿ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮೋದ್ಯಮ ಕೇಂದ್ರಕ್ಕೆ ಇಂದು ಭಾನುವಾರ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದರು.
ಭಾರತ್ ಜೋಡೋ ಪಾದಯಾತ್ರೆಗೆ ಗಾಂಧಿ ಜಯಂತಿ ಹಿನ್ನಲೆಯಲ್ಲಿ ಬೆಳಗ್ಗೆ ಬ್ರೇಕ್ ನೀಡಲಾಗಿದ್ದು, ಬೆಳಗ್ಗೆ 7:30 ರಿಂದ ಮಧ್ಯಾಹ್ನ 3ರವರೆಗೆ ಬದನವಾಳುನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗುತ್ತಿದ್ದಾರೆ.
ಬದನವಾಳುನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ ರಾಹುಲ್, ಗಾಂಧಿ ಜಯಂತಿ ಪ್ರಯುಕ್ತ ಕೆಲವೆಡೆ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ. ಬಳಿಕ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡವರ ಜೊತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3:30 ರಿಂದ 3:45 ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
ಸಂಜೆ ನಾಲ್ಕು ಗಂಟೆಗೆ ಕಡಕೋಳದ ಕಾಳಿಕಾಂಬಾ ದೇವಸ್ಥಾನ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಭಾನುವಾರ ರಾತ್ರಿ ಮೈಸೂರು ರಿಂಗ್ ರಸ್ತೆಯಲ್ಲಿರುವ ಬಂಡಿಪಾಳ್ಯದಲ್ಲಿ ಪಾದಯಾತ್ರಿಗಳು ತಂಗಲಿದ್ದಾರೆ.
1932 ರಲ್ಲಿ ಈ ಗ್ರಾಮಕ್ಕೆ ಭೇಟಿ ಮಹಾತ್ಮ ಗಾಂಧಿ ನೀಡಿದ್ದರು. ಆ ಸಮಯದಲ್ಲಿ ಬದನವಾಳು ಗ್ರಾಮವು ಖಾದಿ ಉತ್ಪಾದನೆಯ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಗಾಂಧೀಜಿ ಗ್ರಾಮೋದ್ಯೋಗವನ್ನು ಉತ್ತೇಜಿಸಲು ಬಯಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ