ಮಳವಳ್ಳಿ: ಟ್ಯೂಶನ್ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ; ಆರೋಪಿ ಬಂಧನ; ಕಠಿಣ ಶಿಕ್ಷೆಗೆ ರಾಜಕೀಯ ಮುಖಂಡರ ಆಗ್ರಹ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೊಲೀಸರು 51 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಬಾಲಕಿ ದಿವ್ಯಾ
ಕೊಲೆಯಾದ ಬಾಲಕಿ ದಿವ್ಯಾ

ಮೈಸೂರು/ಮಂಡ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೊಲೀಸರು 51 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆರೋಪಿ ಕಾಂತರಾಜು, 10 ವರ್ಷದ ಬಾಲಕಿ ದಿವ್ಯಾ ಟ್ಯೂಶನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಚಾಕಲೇಟ್ ಕೊಟ್ಟು ಪುಸಲಾಯಿಸಿ ಕರೆದೊಯ್ದಿದ್ದಾನೆ. ಬಾಲಕಿ ಟ್ಯೂಶನ್ ಗೆ ಹೋಗುತ್ತಿರುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾಂತರಾಜು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ನಂತರ ಮಳವಳ್ಳಿಯ ಮೈಸೂರು ರಸ್ತೆಯ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡದ ಸಂಪ್ ಒಳಗೆ ಮೃತದೇಹವನ್ನು ಎಸೆದು ಹೋಗಿದ್ದಾನೆ.

ಬಾಲಕಿಯ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ನಂತರ ಹುಡುಕಾಡಿದ ಮಳವಳ್ಳಿ ಪೊಲೀಸ್ ಠಾಣೆಯ ವಿಶೇಷ ತಂಡಕ್ಕೆ ಕಾಂತರಾಜು ಈ ಕುಕೃತ್ಯ ಎಸಗಿರುವ ಬಗ್ಗೆ ಸಂದೇಹ ಬಂತು. ಕಾಂತರಾಜು ಕಳೆದ 15 ವರ್ಷಗಳಿಂದ ಈ ಟ್ಯೂಶನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಕೂಡ ಬಾಲಕಿಗೆ ಅನೇಕ ಬಾರಿ ಚಾಕಲೇಟ್ ನೀಡಿದ್ದನಂತೆ. ಮೊನ್ನೆ ಚಾಕಲೇಟ್ ತೆಗೆದುಕೊಳ್ಳಲು ಹೋದಾಗ ಆಕೆಯನ್ನು ಎಳೆದು ಅತ್ಯಾಚಾರವೆಸಗಿ ಕೊಂದು ಶವವನ್ನು ಸಂಪ್ ಗೆ ಎಸೆದು ಹೋಗಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

ಟ್ಯೂಶನ್ ಗೆ ಹೋದ ಮಗಳು ಸಂಜೆಯಾದರೂ ಮನೆಗೆ ವಾಪಸ್ ಬರದಿದ್ದಾಗ ನಿರ್ಮಾಣ ಹಂತದ ಸೈಟ್ ನ ಸಂಪ್ ನಲ್ಲಿ ಮಗಳ ಮೃತದೇಹವಿರುವುದು ಅಕ್ಕಪಕ್ಕದವರಿಂದ ಗೊತ್ತಾಗಿ ಪೊಲೀಸರಿಗೆ ತಿಳಿಸಿದರು. ಹೆಚ್ಚುವರಿ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೂಡಲೇ ಪೊಲೀಸರು ಕಾಂತರಾಜುವನ್ನು ಬಂಧಿಸಿದ್ದು ಆತನ ಬಾಯಿ ಬಿಡಿಸಿದಾಗ ಮಾಡಿರುವ ನೀಚ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ರಾಜಕೀಯ ನಾಯಕರ ಕಂಬನಿ, ಕಠಿಣ ಕ್ರಮಕ್ಕೆ ಆಗ್ರಹ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಟ್ಯೂಶನ್‍ಗೆ ಹೋಗಿದ್ದ ದಿವ್ಯ ಎಂಬ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ.ಇಂತಹ ಘಟನೆಗಳು ಮಾನವ ಕುಲಕ್ಕೆ ನಾಚಿಕೆಯ ಸಂಗತಿ. ಇಂತಹ ನೀಚ ಕಾರ್ಯವೆಸಗಿರುವ ಪಾಪಿಗಳಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ. ರಾಜ್ಯ ಸರ್ಕಾರ ಕೂಡಲೇ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮಳವಳ್ಳಿಯಲ್ಲಿ ಟ್ಯೂಶನ್ ಗೆ ಬಂದ 10 ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ. ತಪ್ಪು ಮಾಡಿದ ಅಪರಾಧಿಗೆ ಕಠಿಣ ಶಿಕ್ಷೆ ಆಗಲೇಬೇಕು ಹಾಗೂ ಆ ಪಾತಕಿಗೆ ಕ್ಷಮೆ ಎನ್ನುವುದೇ ಇರಬಾರದು. ಭವಿಷ್ಯದಲ್ಲಿ ಇಂಥ ನೀಚ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಪುಟ್ಟ ಬಾಲಕಿ ಮೇಲೆ ಅಮಾನುಷ ಕೃತ್ಯ ಎಸಗಿರುವ ಅಪರಾಧಿಗೆ ಯಾವ ಶಿಕ್ಷೆಯು ಕಡಿಮೆ. ಅಪರಾಧಿಗೆ ಕಾನೂನಿನಲ್ಲಿ ಕೊಡಬಹುದಾದ ಅತ್ಯಂತ ಕಠಿಣ ಶಿಕ್ಷೆ ಅತಿ ಶೀಘ್ರದಲ್ಲಿ ಕೊಡುವಂತೆ ಪೊಲೀಸ್ ಮತ್ತು ನ್ಯಾಯಾಂಗದ ಮೂಲಕ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳಿಗೆ ನಾನು ಬದ್ಧಳಾಗಿದ್ದೇನೆ. ಈ ಅಪರಾಧಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಎಚ್ಚರಿಕೆಯಾಗಿರಬೇಕು, ಸಮಾಜಘಾತುಕರಿಗೆ ಒಂದು ಮರೆಯಲಾಗದ ಪಾಠವಾಗಬೇಕು.  

ಇಂತಹ ಘೋರ ಕೃತ್ಯಗಳು ಇನ್ನು ಮುಂದೆ ಆಗದಂತೆ ತಡೆಯುವುದರಿಂದ ಮಾತ್ರ ನಾವು ಆಕೆಯ ಆತ್ಮಕ್ಕೆ ಶಾಂತಿ ಕೋರಲು ಸಾಧ್ಯ. ಸಮಾಜವೇ ತಲೆ ತಗ್ಗಿಸುವಂತಹ ಈ ಕೃತ್ಯ ನನ್ನ ಮನಸ್ಸನ್ನು ಛಿದ್ರಗೊಳಿಸಿದೆ. ಯಾವ ತಂದೆ ತಾಯಿಗೂ ಬರಬಾರದ ನೋವು ಸಹಿಸಿಕೊಳ್ಳುವುದಾದರು ಹೇಗೆ. ಭಗವಂತ ಈ ನೋವನ್ನು ಇನ್ನು ಯಾರಿಗೂ ಕೊಡಬೇಡ ಎಂದು ಬೇಡಿಕೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com