ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ ಸ್ವಾಗತಾರ್ಹ, ಅಂತಿಮ ತೀರ್ಪಿನವರೆಗೆ ಹೈಕೋರ್ಟ್ ಆದೇಶ ಪಾಲನೆ: ಸಚಿವ ಬಿ ಸಿ ನಾಗೇಶ್

ಹಿಜಾಬ್ ವಿವಾದ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ(CJI) ವರ್ಗಾವಣೆ ಆಗಿರುವುದನ್ನು ಸ್ವಾಗತಿಸುತ್ತೇವೆ. ಕೋರ್ಟ್ ಆದೇಶದಂತೆ ಅಲ್ಲಿಯವರೆಗೂ ಹೈಕೋರ್ಟ್ ಆದೇಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಬೆಂಗಳೂರು: ಹಿಜಾಬ್ ವಿವಾದ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ(CJI) ವರ್ಗಾವಣೆ ಆಗಿರುವುದನ್ನು ಸ್ವಾಗತಿಸುತ್ತೇವೆ. ಕೋರ್ಟ್ ಆದೇಶದಂತೆ ಅಲ್ಲಿಯವರೆಗೂ ಹೈಕೋರ್ಟ್ ಆದೇಶವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸಿಜೆಐ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ವಿಶ್ವಾದ್ಯಂತ ಇಂದು ಮಹಿಳೆಯರು ಹಿಜಾಬ್/ಬುರ್ಖಾ ಧರಿಸಬಾರದು ಎಂದು ಒತ್ತಾಯಿಸುತ್ತಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೂಡ ಅದನ್ನು ಪ್ರೋತ್ಸಾಹಿಸುತ್ತದೆ. ಇಂದು ಸುಪ್ರೀಂ ಕೋರ್ಟ್ ನಿಂದ ಉತ್ತಮ ತೀರ್ಪು ನಿರೀಕ್ಷಿಸಿದ್ದೆವು. ಈ ಮಧ್ಯೆ ಕರ್ನಾಟಕ ಹೈಕೋರ್ಟ್ ಆದೇಶವು ಮಧ್ಯಂತರ ಸಮಯದಲ್ಲಿ ಅನ್ವಯಿಸುತ್ತದೆ, ಅಲ್ಲಿಯವರೆಗೂ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ನಿಯಮ ಮುಂದುವರಿಯುತ್ತದೆ, ಸುಪ್ರೀಂ ಕೋರ್ಟ್ ನಿಂದ ಏನೇ ತೀರ್ಪು ಬಂದರೂ ಸ್ವಾಗತಿಸುತ್ತೇವೆ ಎಂದರು.

ಸರ್ಕಾರಿ ಆದೇಶದಲ್ಲಿ ಹೇಳಿರುವಂತೆ ವಿದ್ಯಾರ್ಥಿನಿಯರು ಸೂಚಿತ ಸಮವಸ್ತ್ರದಲ್ಲಿ ಶಾಲೆಗೆ ಬರಬೇಕು. ಶಿಕ್ಷಣ ಸಂಸ್ಥೆಯ ಒಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ನಿಂದ ಉತ್ತಮ ತೀರ್ಪು ನಿರೀಕ್ಷೆಯಲ್ಲಿದ್ದೆವು. ಆದರೆ ಈಗ ಉನ್ನತ ಪೀಠಕ್ಕೆ ಹೋಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಅದೇ ಆಧಾರದಲ್ಲಿ ಹಿಜಾಬ್ ಧರಿಸದೇ ಬರಬೇಕು ಎಂದು ಸಚಿವರು ಹೇಳಿದರು.

ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಜಾಬ್ ವಿವಾದ ಪ್ರಕರಣವನ್ನು ಇಂದು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಎದುರು ನೋಡುತ್ತಿದ್ದೇವೆ. ಅಲ್ಲಿಯವರೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. ಸರ್ಕಾರ ಸಿಜೆಐ ಪೀಠದ ಮುಂದೆ ವಾದ ಮಂಡಿಸಲಿದೆ ಎಂದರು. 

ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ಸ್ವಾಗತಿಸಬೇಕು, ಏಕೆಂದರೆ ಈ ದೇಶ ಸಂವಿಧಾನದ ಮೇಲೆ ನಡೆಯುವುದೇ ಹೊರತು ಯಾವುದೋ ಧಾರ್ಮಿಕ ಆಚರಣೆಗಳು, ಪದ್ಧತಿಗಳ ಮೇಲೆ ನಡೆಯುವುದಲ್ಲ ಎಂದಿದ್ದಾರೆ. 

ಏನಿದು ಹಿಜಾಬ್ ವಿವಾದ?: ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಡುಪಿಯ ಆರು ಮಂದಿ ಮುಸ್ಲಿಂ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋದಾಗ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಗೇಟ್‌ನಲ್ಲಿ ಒಳಗೆ ಬಿಡದೆ ನಿಲ್ಲಿಸಲಾಗಿತ್ತು. ಅವರು ಹಿಜಾಬ್ ಧರಿಸಿದ್ದರಿಂದ ತರಗತಿಗಳಿಗೆ ಹಾಜರಾಗಲು ಅವಕಾಶವಿರಲಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿರುವ ಸ್ಥಳೀಯ ಬಿಜೆಪಿ ಶಾಸಕ ರಘುಪತಿ ಭಟ್ ಅವರು ವಿದ್ಯಾರ್ಥಿನಿಯರಿಗೆ ಡ್ರೆಸ್ ಕೋಡ್ ನ್ನು ಅನುಸರಿಸಲು ಹೇಳಿದರು.

ಅದಕ್ಕೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ನೀಡದಿದ್ದರೆ ತರಗತಿಗೆ ಬರುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದರು. ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದರು. ಅಲ್ಲಿ ಅವರ ಮನವಿಗೆ ಪುರಸ್ಕಾರ ಸಿಗದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com