'ಆಧುನಿಕ ಭಗೀರಥ' ಖ್ಯಾತಿಯ 16 ಕೆರೆಗಳ ನಿರ್ಮಾತೃ ಕಾಮೇಗೌಡ ಇನ್ನಿಲ್ಲ

ಆಧುನಿಕ ಭಗೀರಥ ಖ್ಯಾತಿಯ, 16 ಕೆರೆಗಳನ್ನು ನಿರ್ಮಿಸಿದ್ದ ಕುರಿಗಾಯಿ ಕಾಮೇಗೌಡರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ತಾವು ನಿರ್ಮಿಸಿದ ಕೆರೆಯ ಮುಂದೆ ಕಾಮೇಗೌಡರು(ಸಂಗ್ರಹ ಚಿತ್ರ)
ತಾವು ನಿರ್ಮಿಸಿದ ಕೆರೆಯ ಮುಂದೆ ಕಾಮೇಗೌಡರು(ಸಂಗ್ರಹ ಚಿತ್ರ)

ಮಂಡ್ಯ: ಆಧುನಿಕ ಭಗೀರಥ ಖ್ಯಾತಿಯ, 16 ಕೆರೆಗಳನ್ನು ನಿರ್ಮಿಸಿದ್ದ ಕುರಿಗಾಯಿ ಕಾಮೇಗೌಡ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡ ನಿಧನ ಹೊಂದಿದ್ದು, ಕಳೆದ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದ ವೇಳೆ ಅವರನ್ನು ಭೇಟಿಯಾಗಿ ಮಾತನಾಡಿಸಬೇಕೆಂದು ಕಾಮೇಗೌಡರು ಇಚ್ಚೆಪಟ್ಟಿದ್ದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರು ತಮ್ಮೂರಿನಲ್ಲಿ ಬೆಟ್ಟ ಗುಡ್ಡ ಅಗೆದು ಪ್ರಾಣಿ ಪಕ್ಷಿಗಳಿಗಾಗಿ 16 ಕೆರೆಗಳನ್ನು ನಿರ್ಮಿಸಿ ನೀರು ಹರಿಸಿ ಆಧುನಿಕ ಭಗೀರಥ ಎಂದು ಜನಪ್ರಿಯತೆ ಗಳಿಸಿದ್ದರು. ಅವರ ಬಗ್ಗೆ ಪ್ರಧಾನಿ ಮೋದಿಯವರು ಕೂಡ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದರು.

ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಎಂದು ಕಾಮೇಗೌಡ ಕೈಯಾರೆ 16 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಕುರಿ ಕಾಯುವ ಕೆಲಸವನ್ನು ಹವ್ಯಾಸವಾಗಿ ಮಾಡುತ್ತಿದ್ದರು. ಕಾಮೇಗೌಡರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 

ಮುಖ್ಯಮಂತ್ರಿ ಸೇರಿ ಹಲವು ಗಣ್ಯರು ಕಂಬನಿ: ಕಾಮೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಶ್ರೀ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com