ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ತನಿಖಾ ವರದಿ ಕೇಳಿದ ಎನ್ ಸಿಪಿಸಿಆರ್

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ಪ್ರಸಿದ್ಧ ಮುರುಘಾ ಮಠದ ಪ್ರಧಾನ ಮಠಾಧೀಶ ಡಾ ಶಿವಮೂರ್ತಿ ಶಿವಾಚಾರ್ಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಕರ್ನಾಟಕ ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದೆ.
ಮುರುಘಾ ಶ್ರೀಗಳು
ಮುರುಘಾ ಶ್ರೀಗಳು

ನವದೆಹಲಿ/ಚಿತ್ರದುರ್ಗ: ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ಪ್ರಸಿದ್ಧ ಮುರುಘಾ ಮಠದ ಪ್ರಧಾನ ಮಠಾಧೀಶ ಡಾ ಶಿವಮೂರ್ತಿ ಶಿವಾಚಾರ್ಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಕರ್ನಾಟಕ ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದೆ.

ಮಾಧ್ಯಮ ವರದಿಗಳ ಪ್ರಕಾರ, ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮಠದ ಪ್ರಧಾನ ಮಠಾಧೀಶರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಇಬ್ಬರು ಅಪ್ರಾಪ್ತ ಬಾಲಕಿಯರು ಮೊನ್ನೆ ಮಂಗಳವಾರ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ತನಿಖೆಯ ಪ್ರಕ್ರಿಯೆಯಲ್ಲಿ ಬಾಲಕಿಯರ ಗುರುತುಗಳನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿದೆ. ಈ ಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳಲ್ಲಿ ಇತರ ದಾಖಲೆಗಳೊಂದಿಗೆ ಪ್ರಕರಣದ ವಿವರವಾದ ವರದಿಯನ್ನು ಒದಗಿಸುವಂತೆ ಅದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೇಳಿದೆ. 

ಚಿತ್ರದುರ್ಗ ಜಿಲ್ಲಾ ಪೊಲೀಸರು ಇಬ್ಬರು ಸಂತ್ರಸ್ತರನ್ನು ತಮ್ಮ ತನಿಖೆಯ ಭಾಗವಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 164 ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಲು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಿದರು. CrPC ಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ಅಪರಾಧದಲ್ಲಿ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಬಹುದು.

ಸಂತ್ರಸ್ತೆಯರಲ್ಲಿ ಒಬ್ಬ ದಲಿತ ಬಾಲಕಿಯಾಗಿರುವ ಕಾರಣ ಮಂಗಳವಾರ ಮಠಾಧೀಶರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.ಶರಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮಂಗಳವಾರ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಪೊಲೀಸ್ ತಂಡ ಆಗಾಗ್ಗೆ ಮಠ ಮತ್ತು ಹಾಸ್ಟೆಲ್‌ಗೆ ಭೇಟಿ ನೀಡುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಶಿವಮೂರ್ತಿ ಶಿವಾಚಾರ್ಯ ಶರಣರು, ಈ ಆರೋಪಗಳು ತಮ್ಮ ವಿರುದ್ಧದ ಪಿತೂರಿಯ ಭಾಗವಾಗಿದೆ. ಪ್ರಕರಣದಿಂದ ಸಂಪೂರ್ಣವಾಗಿ ಆರೋಪ ಮುಕ್ತವಾಗಿ ಹೊರಬರುವುದಾಗಿ ಹೇಳಿದ್ದಾರೆ. 

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೂರು ಆಧರಿಸಿ ಮಠದ ಹಾಸ್ಟೆಲ್ ವಾರ್ಡನ್ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. 

ಮುರುಘಾ ಮಠದ ಹಾಸ್ಟೆಲ್​​​​​ ಬಾಲಕಿಯರು ಬೇರೆ ಸ್ಥಳಕ್ಕೆ ಶಿಫ್ಟ್: ಮುರುಘಾ ಮಠದ ಹಾಸ್ಟೆಲ್​​​​​ ಬಾಲಕಿಯರನ್ನು ಬೇರೆ ಸ್ಥಳಕ್ಕೆ ಶಿಫ್ಟ್​ ಮಾಡಲಾಗಿದೆ.  ಅಧಿಕಾರಿಗಳು ಸರ್ಕಾರಿ ಹಾಸ್ಟೆಲ್​ಗಳಿಗೆ ಶಿಫ್ಟ್ ಮಾಡಿದ್ದಾರೆ.

ಡಿಸಿ ಕವಿತಾ ಮನ್ನಿಕೇರಿ ಹಾಸ್ಟೆಲ್​ಗೆ ಭೇಟಿ ನೀಡಿದ್ದಾಗ ಕೆಲವು ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದು,  ಪೊಲೀಸರನ್ನು ನೋಡಿ ನಮಗೆ ಭಯ ಆಗುತ್ತಿದೆ ಎಂದಿದ್ದರು. ಹೀಗಾಗಿ 140 ಮಂದಿ ಪೈಕಿ 60 ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com