ತೊರೆಕಾಡನಹಳ್ಳಿ ನೀರು ಸರಬರಾಜು ಘಟಕಕ್ಕೆ ಮಧ್ಯಾಹ್ನ ಭೇಟಿ, ಐಟಿ ಕಂಪೆನಿಗಳಿಗೆ ಆಗಿರುವ ನಷ್ಟ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ

ಉದ್ಯಾನನಗರಿ ಬೆಂಗಳೂರಿನಲ್ಲಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜಲಾವೃತವಾಗಿ ಅಂದಾಜು 225 ಕೋಟಿ ರೂಪಾಯಿ ನಷ್ಟವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ ಕಂಪೆನಿಗಳಿಗೆ ಭರವಸೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜಲಾವೃತವಾಗಿ ಅಂದಾಜು 225 ಕೋಟಿ ರೂಪಾಯಿ ನಷ್ಟವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ ಕಂಪೆನಿಗಳಿಗೆ ಭರವಸೆ ನೀಡಿದ್ದಾರೆ.

ತೀವ್ರ ಮಳೆ, ಪ್ರವಾಹದಿಂದ ಆಗಿರುವ ನಷ್ಟ ಹಾಗೂ ಅದಕ್ಕೆ ನೀಡಬೇಕಾಗಿರುವ ಪರಿಹಾರಗಳ ಬಗ್ಗೆ ಚರ್ಚೆ ನಡೆಸಲು ಐಟಿ ಕಂಪೆನಿಗಳ ಪ್ರತಿನಿಧಿಗಳನ್ನು ಕರೆದು ಮಾತನಾಡುವುದಾಗಿ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಬಂದಾಗ ನೀರು ನಿಲ್ಲುವುದರಿಂದ ಆಗುವ ಸಮಸ್ಯೆಗಳ ಕುರಿತು ಐಟಿ ಕಂಪೆನಿಗಳ ಪ್ರತಿನಿಧಿಗಳನ್ನು ಕರೆದು ಮಾತನಾಡುತ್ತೇನೆ. ಮಳೆಯಿಂದಾಗಿ ಆಗಿರುವ ನಷ್ಟದ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡುವ ಕುರಿತು ಮಾತನಾಡುತ್ತೇನೆ ಎಂದರು.

ನಗರದ ಹೊರವರ್ತುಲ ರಸ್ತೆಯ ಸಮಸ್ಯೆಗಳನ್ನು ಬಗೆಹರಿಸಿ ಎಂದು ಐಟಿ ಕಂಪೆನಿಗಳು ಸರ್ಕಾರವನ್ನು ಒತ್ತಾಯಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ. ನಿನ್ನೆ ಸಾಯಂಕಾಲದಿಂದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಪ್ರತಿಷ್ಠಿತ ಪ್ರದೇಶಗಳು ಸೇರಿದಂತೆ ಬಹುತೇಕ ಕಡೆ ಜಲಾವೃತವಾಗಿ ನಿವಾಸಿಗಳಿಗೆ ಭಾರೀ ಸಮಸ್ಯೆಯಾಗಿದೆ. ಜಲಾವೃತಗೊಂಡಿರುವುದರಿಂದ ಸಂಚಾರ ದಟ್ಟಣೆಯುಂಟಾಗಿದ್ದು ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ರಾತ್ರಿ ಮಳೆಯ ನಡುವೆ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಯಿತು. 

ತಗ್ಗು ಪ್ರದೇಶಗಳಲ್ಲಿ, ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ಗಳಲ್ಲಿ ಹಾಗೂ ಸುತ್ತಮುತ್ತ ನಿಂತಿರುವ ನೀರನ್ನು ಹೊರತೊಗೆಯಲು ಪಂಪ್ ಸೆಟ್ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುವುದು. ಮಧ್ಯಾಹ್ನ ಬೆಂಗಳೂರಿನ ಮಹದೇವಪುರ, ಬೊಮ್ಮನಹಳ್ಳಿ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಆದೇಶಗಳನ್ನು ನೀಡುತ್ತೇನೆ. 

ಬೆಂಗಳೂರಿನಲ್ಲಿ ಭಾರೀ ಮಳೆ ಬಂದಾಗ ತಾತ್ಕಾಲಿಕ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬೇಕೆಂದು ಈಗಾಗಲೇ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಸರ್ಜಾಪುರ, ಮಾರತ್ತಹಳ್ಳಿ ಭಾಗದಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಈ ಹಿನ್ನೆಲೆ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್​ನಿಂದಾಗಿ ಸರ್ಜಾಪುರ, ಮಾರತಹಳ್ಳಿ ಭಾಗದ ಭಾಗಶಃ ಐಟಿ ಬಿಟಿ ಕಂಪನಿಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. 

ತೊರೆಕಾಡನಹಳ್ಳಿ ನೀರು ಸರಬರಾಜು ಘಟಕ ಮುಳಗಡೆಯಾಗಿರುವ ಬಗ್ಗೆ ಈಗಾಗಲೇ ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರ ಜೊತೆ ಮಾತನಾಡಿದ್ದು ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ತುರ್ತು ಕೆಲಸ ನಡೆಯುತ್ತಿದೆ. ಸಂಜೆಯೊಳಗೆ ಯಂತ್ರೋಪಕರಣಗಳು ಮತ್ತೆ ಚಾಲೂ ಆಗುತ್ತದೆ ನೀರನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಮಧ್ಯಾಹ್ನ ಹೋಗಿ ಪರಿಶೀಲನೆ ಮಾಡುತ್ತೇನೆ. ಸಂಜೆಯೊಳಗೆ ಯಂತ್ರೋಪಕರಣಗಳು ಮತ್ತೆ ಚಾಲೂ ಆಗುತ್ತದೆ. ನೀರನ್ನು ತೆಗೆಯುತ್ತಿದ್ದಾರೆ. ತೊರೆಕಾಡನಹಳ್ಳಿ ಪರಿಶೀಲನೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ಹೇಳುತ್ತೇನೆ ಎಂದಿದ್ದಾರೆ. 

ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಿಬಿಎಂಪಿ ಆಯುಕ್ತರು ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅತಿ ಹೆಚ್ಚು ಹಾನಿಯಾಗಿರುವ ನಗರದ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಿಗೆ ಎರಡು ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ತಂಡಗಳನ್ನು ದೋಣಿಗಳು ಮತ್ತು ಇತರ ಸಲಕರಣೆಗಳೊಂದಿಗೆ ನಿಯೋಜಿಸಲು ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ಎಂಜಿನಿಯರ್‌ಗಳೂ ಇದ್ದಾರೆ ಎಂದರು. 

ಜಲಾವೃತಗೊಂಡಿರುವ ರಸ್ತೆಗಳಿಂದ ಆದಷ್ಟು ಬೇಗ ನೀರು ಹರಿದು ಹೋಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾತ್ಕಾಲಿಕ ಚರಂಡಿಯನ್ನು ಹೇಗೆ ರಚಿಸುವುದು ಮತ್ತು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವ ಕುರಿತು ಯೋಜನೆ ಇದೆ, ಅದನ್ನು ಇಂದು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನ ಹಲವೆಡೆ ನೀರಿನ ಸಮಸ್ಯೆ: ಬೆಂಗಳೂರು ನೀರು ಸರಬರಾಜು ಘಟಕ ಮುಳಗಡೆ ಹಿನ್ನಲೆ  ನಗರದ ಹಲವು ಪ್ರದೇಶಗಳಿಗೆ ನೀರು ಸರಬರಾಜು ಸಮಸ್ಯೆಯಾಗಿದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಘಟಕಕ್ಕೆ ಭೇಟಿ ನೀಡಿ  ಸಿಎಂ ಬಸವರಾಜ ಬೊಮ್ಮಾಯಿ, ಪರಿಶೀಲನೆ ನಡೆಸಲಿದ್ದಾರೆ. ನೀರು ಪೂರೈಕೆ ಸ್ಥಗಿತದಿಂದ ಅರ್ಧ ಬೆಂಗಳೂರಿಗೆ ಸಮಸ್ಯೆ‌ಯಾಗಲಿದೆ.  ದೊಡ್ಡ ಸಮಸ್ಯೆ ಹಿನ್ನಲೆ ಟಿ.ಕೆ.ಹಳ್ಳಿ ಘಟಕಕ್ಕೆ ಸಿಎಂ ಭೇಟಿ ಕೊಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com