ಬೆಂಗಳೂರಲ್ಲಿ ಮುಂದುವರೆದ ಮಳೆ ಆರ್ಭಟ; ಬುಧವಾರ ಸಂಜೆ ಸಾಫ್ಟ್ ವೇರ್ ಕಂಪನಿಗಳ ಜೊತೆ ಸಭೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರವೂ ಮಳೆ ಆರ್ಭಟ ಮುಂದುವರೆದಿದ್ದು, ಕಂಡು ಕೇಳರಿಯದ ಮಳೆಯಿಂದ ರಾಜಧಾನಿಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ಸಂಜೆ 5 ಗಂಟೆಗೆ ಹಲವು ಸಾಫ್ಟ್ ವೇರ್ ಕಂಪನಿಗಳ ಮುಖ್ಯಸ್ಥರ/ಪ್ರತಿನಿಧಿಗಳ ಸಭೆ ಕರೆದಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ಜಲಮಂಡಲಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಉದ್ಯಮಿಗಳು ಮಳೆಯಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಇನ್ಫೋಸಿಸ್, ವಿಪ್ರೊ, ಎಂಫಸಿಸ್, ನಾಸ್ಕಾಂ, ಗೋಲ್ಡ್ಮನ್ ಸ್ಯಾಕ್ಸ್, ಇಂಟೆಲ್, ಟಿಸಿಎಸ್, ಫಿಲಿಪ್ಸ್, ಸೊನಾಟಾ ಸಾಫ್ಟ್ ವೇರ್ ಮುಂತಾದ ಕಂಪನಿಗಳ ಮುಖ್ಯಸ್ಥರು ಇಲ್ಲವೇ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಲಾಗುವುದು. ಜೊತೆಗೆ, ನಗರದ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಪಿಪಿಟಿ ಪ್ರಸ್ತುತ ಪಡಿಸಲಿದ್ದಾರೆ. ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ