ಮಳೆ ಅವಾಂತರಕ್ಕೆ ಐಟಿ ಕಂಪನಿಗಳೂ ಕಾರಣ; ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಮೋಹನ್ ದಾಸ್ ಪೈಗೆ ಬಿಜೆಪಿ ತಿರುಗೇಟು

ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಬೆಂಗಳೂರು ಬಗ್ಗೆ 'ಸೇವ್ ಬೆಂಗಳೂರು' ಎಂಬ ಅಭಿಯಾನ ಹಮ್ಮಿಕೊಂಡು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಮೋಹನ್ ದಾಸ್ ಪೈ
ಮೋಹನ್ ದಾಸ್ ಪೈ

ಬೆಂಗಳೂರು: ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಬೆಂಗಳೂರು ಬಗ್ಗೆ 'ಸೇವ್ ಬೆಂಗಳೂರು' ಎಂಬ ಅಭಿಯಾನ ಹಮ್ಮಿಕೊಂಡು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಐಟಿ-ಬಿಟಿ ಕಂಪನಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಪ್ರಧಾನಿ ನರೇಂದ್ರ ಮೋದಿ‌ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿದ್ದ ಪೈ ಸರ್ಕಾರವನ್ನು ಬೆದರಿಸುವ ಬದಲಾಗಿ ತಮ್ಮ ನೇತೃತ್ವದ ಐಟಿ ಕಂಪನಿಗಳು ಒತ್ತುವರಿ ಮಾಡಿರುವ ರಾಜಕಾಲುವೆ ತೆರಲುಗೊಳಿಸಲಿ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಐಟಿ ಕಂಪನಿಗಳ ವಿರುದ್ಧ ರಾಜಕಾಲುವೆ ಒತ್ತುವರಿ, ಸಿಎಸ್‌ಆರ್ ಫಂಡ್ ವಂಚನೆ ಸೇರಿದಂತೆ ಕೆಲವೊಂದು ಗಂಭೀರ ಸ್ವರೂಪದ ಆರೋಪಗಳನ್ನು ಅವರು ಮಾಡಿದ್ದಾರೆ.

ಮೋಹನ್ ದಾಸ್ ಪೈ ಅವರೇ, ನೀವು ಕಳೆದ 10-15 ದಿನಗಳಿಂದ ಸೇವ್ ಬೆಂಗಳೂರು ಎಂಬ ಹೆಸರಿನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದಿರುವುದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆಸುತ್ತಿದ್ದೀರಿ. ಪ್ರವಾಹ ಉಂಟಾಗಿರುವುದರಿಂದ ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು ತೆಲಂಗಾಣದತ್ತ ವಲಸೆ ಹೋಗಲು ಚಿಂತಿಸುತ್ತಿವೆ ಎಂದು ನೀವು ಪತ್ರದಲ್ಲಿ ತಿಳಿಸಿದ್ದೀರಿ.

ಆದರೆ, 1999ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಪೋರೇಟ್ ಕಂಪನಿಗಳು ಪ್ರಾರಂಭವಾದವು. ಇದಕ್ಕೆ ಕಾರಣ ಸಮುದ್ರಮಟ್ಟದಿಂದ 3,000 ಅಡಿ ಎತ್ತರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದ್ದಾರೆ.

ಇಲ್ಲಿನ ವಾತಾವರಣ ಚೆನ್ನಾಗಿದೆ, ಇಲ್ಲಿನ ಜನರು ಮೃದು ಸ್ವಭಾವದವರು ಎಂಬುದಾಗಿತ್ತು. ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು, ಟೆಕ್ ಪಾರ್ಕ್, ಬ್ಯುಸಿನೆಸ್ ಪಾರ್ಕ್​ಗಳ ಅನುಕೂಲಕ್ಕೆಂದು 1999ರಿಂದ 2004ರ ಅವಧಿಯಲ್ಲಿ ಬೆಂಗಳೂರಿನಲ್ಲಿ 4,500 ಕಿ.ಮೀ ಉದ್ದದ ರಸ್ತೆಗಳಲ್ಲಿ OFC Ductಗಳನ್ನು ಹಾಕಿಕೊಳ್ಳಲು ರಸ್ತೆ ಅಗೆತ ಶುಲ್ಕ ಪಡೆಯದೆ ಉಚಿತ ಅನುಮತಿ ನೀಡಲಾಗಿತ್ತು. ಇದಕ್ಕೆ ಸರ್ಕಾರ ತನ್ನ ಬೊಕ್ಕಸದಿಂದಲೇ ಸುಮಾರು 3,000 ಕೋಟಿ ರೂ. ಹಣ ಖರ್ಚು ಮಾಡಿತ್ತು ಎಂಬುದನ್ನು ನೀವು ಮರೆತಂತಿದೆ ಎಂದು ಎನ್​.ಆರ್​. ರಮೇಶ್ ಟೀಕಿಸಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಗಳು, ಐಟಿ ಪಾರ್ಕ್​ಗಳು ಜಲಾವೃತವಾಗಿರುವ ಬಗ್ಗೆ ನೀವು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೀರಿ. ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಎಂಬ 2 ಸಂಘಟನೆಗಳನ್ನು ಮಾಡಿಕೊಂಡಿರುವ ಬೆಂಗಳೂರಿನ ಐಟಿ ಬಿಟಿ ಕಂಪನಿಗಳು ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಿಶ್ವದ ಏಕೈಕ ನಗರವೆಂಬ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಕಪ್ಪು ಚುಕ್ಕೆ ಮೂಡುವಂತೆ ವರ್ತಿಸಿದ್ದೀರಿ. ಬೆಂಗಳೂರಿನ ಮಳೆಯ ಅವಾಂತರಕ್ಕೆ ಬೆಂಗಳೂರಿನ ಐಟಿ ಕಂಪನಿಗಳು, ಐಟಿ ಪಾರ್ಕ್​ಗಳು ಸಹ ಕಾರಣ ಎಂಬ ಸತ್ಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಎನ್​ಆರ್ ರಮೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಅಡಿಯಲ್ಲಿರುವ 79 ಟೆಕ್ ಪಾರ್ಕ್​ಗಳು, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಡಿಯಲ್ಲಿರುವ 250ಕ್ಕೂ ಹೆಚ್ಚು ಐಟಿ/ ಬಿಟಿ ಕಂಪನಿಗಳು, ಮಹದೇವಪುರದಲ್ಲಿರುವ 100ಕ್ಕೂ ಹೆಚ್ಚು ಐಟಿ ಕಂಪನಿಗಳು ತಮ್ಮ ಕಂಪನಿಗಳ ಕಟ್ಟಡದ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದ ರಾಜಕಾಲುವೆಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡಿವೆ.

ಪ್ರಸ್ತುತ ಬೆಂಗಳೂರು ಮಹಾನಗರದಲ್ಲಿ 3,758 ಐಟಿ ಕಂಪೆನಿಗಳು, 92 ಬಿಟಿ ಕಂಪೆನಿಗಳು ಮತ್ತು 79 ಟೆಕ್‌ ಪಾರ್ಕ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ವರ್ಷ ಎರಡು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ನಡೆಸುತ್ತಿರುತ್ತವೆ. ನ್ಯಾಯಯುತವಾಗಿ ಎಲ್ಸಿಯಾ, ಒಆರ್‌ಆರ್‌ಸಿಎ ಮತ್ತು ಐಟಿಪಿಎಲ್‌ನಲ್ಲಿ ಇರುವ ಸಂಸ್ಥೆಗಳೇ ವಾರ್ಷಿಕ ಕನಿಷ್ಠ 2,500 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ಸಿಎಸ್‌ಆರ್ ನಿಧಿ ಹೆಸರಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮೂಲಕ ಸಾರ್ವಜನಿಕರ ಉಪಯೋಗದ ಕೆಲಸಗಳಿಗೆ ಉಪಯೋಗಿಸಬೇಕಿದೆ.

ಆದರೆ ತಾವು ಕೇವಲ ಹತ್ತಾರು ಕೋಟಿ ರೂ.ಗಳಷ್ಟನ್ನು ಮಾತ್ರವೇ ಸಿಎಸ್‌ಆರ್ ಅನುದಾನದಲ್ಲಿ ವಿನಿಯೋಗಿಸುತ್ತಾ, ಸಿಎಸ್‌ಆರ್‌ ಅನುದಾನದಲ್ಲೂ ಸಹ ಬೆಂಗಳೂರು ಮಹಾನಗರಕ್ಕೆ ಬೃಹತ್‌ ಮಟ್ಟದಲ್ಲಿ ವಂಚನೆ ಮಾಡಿರುತ್ತೀರಿ ಎಂದು ಎನ್‌ಆರ್‌ ರಮೇಶ್‌ ದೂರಿದ್ದಾರೆ.

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಸಮರ್ಪಕ ಆಡಳಿತ ನಿರ್ವಹಣೆ ಕುರಿತು ಉದ್ಯಮಿ ಮೋಹನ್ ದಾಸ್ ಪೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸೋಷಿಯಲ್ ಮೀಡಿಯಾದಲ್ಲೂ ಟ್ಯಾಗ್ ಮಾಡಿದ್ದರು. ಬೆಂಗಳೂರಿನ ರಾಜ ಕಾಲುವೆಗಳು ಹೂಳಿನಿಂದ ತುಂಬಿವೆ. ಎಲ್ಲಾ ಕಡೆ ಕಸ, ಅವಶೇಷಗಳು ಬಿದ್ದಿದೆ.

ಮುಖ್ಯವಾದ ಯೋಜನೆಗಳನ್ನು ಪರಿಶೀಲಿಸಿ ಬೆಂಗಳೂರು ಉಳಿಸಿ ಎಂದು ಪ್ರಧಾನಿಗೆ ಮನವಿ ಮಾಡಿದ್ದರು. ಸ್ಥಳೀಯ ಸರ್ಕಾರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾದಾಗ ಪ್ರಧಾನಿ ನರೇಂದ್ರ ಮೋದಿ ಕೊನೆಯ ಭರವಸೆ. ಏಕೆಂದರೆ ಆಡಳಿತ ಸುಧಾರಿಸಬೇಕಾಗಿದೆ, ನಮ್ಮ ನಗರಕ್ಕೆ ಉತ್ತಮ ಕಾನೂನುಗಳು, ಉತ್ತಮ ಹೊಣೆಗಾರಿಕೆಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com