ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ: ಸಚಿವೆ  ಶಶಿಕಲಾ ಜೊಲ್ಲೆ

ರಾಜ್ಯ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ  ಶಶಿಕಲಾ ಜೊಲ್ಲೆ ಅವರು ಬುಧವಾರ ಹೇಳಿದ್ದಾರೆ. 
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ  ಶಶಿಕಲಾ ಜೊಲ್ಲೆ ಅವರು ಬುಧವಾರ ಹೇಳಿದ್ದಾರೆ. 

ಇಂದು ವಿಧಾನಪರಿಷತ್ತಿನ ಪ್ರಶ್ನೋತ್ತರ ಕಾರ್ಯಕಲಾಪದಲ್ಲಿ ಸದಸ್ಯ ಎನ್‌ ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಬೆಂಗಳೂರು ನಗರ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಾಲಯವು ಪ್ರವರ್ಗ “ಬಿ” ವರ್ಗದ ಧಾರ್ಮಿಕ ಸಂಸ್ಥೆಯಾಗಿರುತ್ತದೆ. ಪ್ರಸ್ತಾವಿತ ದೇವಾಲಯವು ಬೆಂಗಳೂರು ನಗರ ನೀಲಸಂದ್ರ ಗ್ರಾಮದ ಸರ್ವೇ ನಂ 79 ರಲ್ಲಿ 15 ಎಕರೆ 12 ಗುಂಟೆ ವಿಸ್ತೀರ್ಣ, ಹೊಂಗಸಂದ್ರ ಗ್ರಾಮದ ಸರ್ವೇ ನಂ. 33 ರಲ್ಲಿ 16 ಎಕರೆ 25 ಗುಂಟೆ ಜಮೀನು ಕಂದಾಯ ದಾಖಲಾತಿಯಂತೆ ದೇವಸ್ಥಾನದ ಹೆಸರಿನಲ್ಲಿದೆ.

ಈ ಜಮೀನಿನಲ್ಲಿ ಅತಿಕ್ರಮವಾಗಿ 229 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ. ಇದಕ್ಕೆ ಸಂಬಂಧಪಟ್ಟಂತೆ 13 ಜನರ ವಿರುದ್ದ ಕರ್ನಾಟಕ ಭೂಕಬಳಿಕೆ ನಿಷೇದ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿಕ್ರಮಣಕಾರರ ಪರ ಸಲ್ಲಿಸಲಾಗಿದ್ದ ಬೆಂಗಳೂರಿನ 8ನೇ ಹೆಚ್ಚುವರಿ ಸಿಟಿ ಸಿವಿಲ್‌ ಜಡ್ಜ್‌ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವು ವಜಾಗೊಂಡಿದ್ದು, ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇಲಾಖೆಯ ವತಿಯಿಂದ ಸೂಕ್ತ ವಾದವನ್ನು ಮಂಡಿಸಲಾಗುತ್ತಿದೆ ಎಂದರು.

ನೀಲಸಂದ್ರ ಗ್ರಾಮದಲ್ಲಿನ ಅನಧಿಕೃತ ಅತಿಕ್ರಮಣಗಾರರನ್ನು ತೆರವುಗೊಳಿಸಿ 9 ಎಕರೆ ಜಮೀನಿಗೆ ಕಾಂಪೌಂಡ್‌ ನಿರ್ಮಿಸಲು ಈಗಾಗಲೇ 80 ಲಕ್ಷ ರೂಪಾಯಿಗಳನ್ನು ಜಿಲ್ಲಾಧಿಕಾರಿಗಳಿಗೆ ಮಂಜೂರು ಮಾಡಲಾಗಿದೆ. ಆದರೆ, ಈ ಕಾಮಗಾರಿಯನ್ನು ಕೈಗೊಳ್ಳಲು ಕೆಲವು ತಾಂತ್ರಿಕ ಅಡಚಣೆಗಳಿದ್ದು, ಕಂದಾಯ ಸಚಿವರ ಗಮನಕ್ಕೆ ಈ ವಿಷಯವನ್ನು ತಂದಿದ್ದು, ಶೀಘ್ರದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಅನಧಿಕೃತವಾಗಿ ನಿರ್ಮಸಲಾದ ಮನೆಗಳಿಗೆ ವಿದ್ಯುತ್‌, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ನೀಡದಂತೆ ಹಾಗೂ ಖಾತೆಯನ್ನು ನೋಂದಾಯಿಸದಂತೆ ಬಿಬಿಎಂಪಿ ಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ದೇವಸ್ಥಾನಗಳ ಆಸ್ತಿ ಒತ್ತುವರಿದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ
ದೇವಸ್ಥಾನಗಳ ಆಸ್ತಿಗಳು ದೇವಸ್ತಾನಗಳ ಹೆಸರಿನಲ್ಲೇ ಇರಬೇಕು. ದೇವಸ್ಥಾನಗಳ ಆಸ್ತಿಗಳನ್ನು ಸರ್ವೇ ಕಾರ್ಯವೂ ಭರದಿಂದ ಸಾಗಿದೆ. ಈ ಸರ್ವೇ ಕಾರ್ಯದ ವರದಿಯ ಆಧಾರದ ಮೇಲೆ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಅತಿಕ್ರಮಣ ತಡೆಯದ ಅಧಿಕಾರಿಗಳ ಮೇಲೂ ಕಠಿಣ ಕ್ರಮ
ಧರ್ಮರಾಯ ದೇವಸ್ಥಾನದ ಜಮೀನು ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ 6 ಅಧಿಕಾರಿಗಳಿಗೆ ನೋಟೀಸ್‌ ನೀಡಲಾಗಿದೆ. ಈಗಾಗಲೇ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಿದ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯರು ಈ ಸಂಧರ್ಭದಲ್ಲಿ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com