ರಾಮ ಮಂದಿರ ಉದ್ಘಾಟನೆಗೆ ಮುನ್ನ 'ರಥ ಯಾತ್ರೆ' ಕೈಗೊಳ್ಳಬೇಕು: ಉಡುಪಿ ಪೇಜಾವರ ಮಠಾಧೀಶ ಒತ್ತಾಯ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ‘ರಥಯಾತ್ರೆ’ ನಡೆಸಬೇಕೆಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಹಾಗೂ ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಪ್ರಸ್ತಾವನೆ ಮುಂದಿಟ್ಟಿದ್ದಾರೆ.
Published: 14th September 2022 01:29 PM | Last Updated: 14th September 2022 02:19 PM | A+A A-

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರದ ಮಾದರಿ
ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ‘ರಥಯಾತ್ರೆ’ ನಡೆಸಬೇಕೆಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಹಾಗೂ ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ನಿನ್ನೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರನ್ನು ಆಕರ್ಷಿಸುವುದು ಯಾತ್ರೆಯ ಉದ್ದೇಶವಾಗಿದೆ. ಅಯೋಧ್ಯೆಯ ವಿಮೋಚನೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅನೇಕ ಜನರಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಅವರನ್ನೂ ನೆನಪಿಸಿಕೊಳ್ಳಬೇಕು ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ದೇಣಿಗೆ ಹರಿದು ಬರುತ್ತಿದೆ. ಪ್ರತಿ ವರ್ಷ ಸುಮಾರು 100 ಕೋಟಿ ರೂಪಾಯಿ ದೇಣಿಗೆ ಪಡೆದು ವ್ಯವಸ್ಥಿತವಾಗಿ ಹಣ ಬಳಕೆ ಮಾಡಲಾಗುತ್ತಿದೆ. ರಾಮ ಮಂದಿರ ಯೋಜನೆಗೆ ಆರಂಭದಲ್ಲಿ 400 ಕೋಟಿ ರೂಪಾಯಿ ಯೋಜನೆ ಹಾಕಲಾಗಿತ್ತು. ಆದರೆ ಈಗ ವೆಚ್ಚ ಹೆಚ್ಚಿದ್ದು, ಪ್ರಸ್ತುತ ಅಂದಾಜಿನ ಪ್ರಕಾರ ನಿರ್ಮಾಣಕ್ಕೆ ಸುಮಾರು 1,300 ಕೋಟಿ ರೂಪಾಯಿ ಬೇಕಾಗಬಹುದು ಎಂದರು.
ಇದನ್ನೂ ಓದಿ: ಅಯೋಧ್ಯೆ: 2024ರ ಮಕರಸಂಕ್ರಾಂತಿಯಂದು ಹೊಸ ದೇವಾಲಯದ ಗರ್ಭಗುಡಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ
ರಾಮಾಯಣದಲ್ಲಿ ಹನುಮಂತನ ಪಾತ್ರ ಬಹುಮುಖ್ಯವಾಗಿದ್ದು, ಹನುಮಂತನ ನಾಡಾಗಿರುವ ಕರ್ನಾಟಕಕ್ಕೆ ರಾಮಮಂದಿರಕ್ಕೂ ವಿಶೇಷ ಸಂಬಂಧವಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ಸಂಪರ್ಕವನ್ನು ಅಖಂಡವಾಗಿಡಲು ರಾಜ್ಯದಿಂದ ರಾಮಮಂದಿರಕ್ಕೆ ‘ಸ್ವರ್ಣ ಶಿಖರ’ (ಚಿನ್ನದ ಶಿಖರ) ನೀಡಲಾಗುವುದು ಎಂದು ಹೇಳಿದರು.