ಬಿಎಂಟಿಸಿ, ಕೆಎಸ್ ಆರ್ ಟಿಸಿ ಖಾಸಗೀಕರಣಕ್ಕೆ ಸರ್ಕಾರ ನಿರ್ಧಾರ: 2030ರ ವೇಳೆಗೆ 35 ಸಾವಿರ ಬಸ್‌ಗಳು ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತನೆ!

ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳನ್ನು ಖಾಸಗೀರಣಗೊಳಿಸಲು ಸಿದ್ಧತೆ ನಡೆಸಿದೆ.
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳನ್ನು ಖಾಸಗೀರಣಗೊಳಿಸಲು ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ 2030ರ ವೇಳೆಗೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್‌ ಬಸ್‌ಗಳನ್ನಾಗಿ ಪರಿವರ್ತಿಸಿ ಕಾರ್ಯಾಚರಣೆ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ತನ್ವೀರ್‌ಸೇಠ್‌ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೆಡೆ ಡೀಸೆಲ್‌ ದರ ಹೆಚ್ಚಳ, ಇನ್ನೊಂದೆಡೆ ನಿರ್ವಹಣೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ ರಾಜ್ಯದ ಸಾರಿಗೆ ನಿಗಮದಲ್ಲಿನ 35 ಸಾವಿರ ಬಸ್‌ಗಳನ್ನು 2030ರ ವೇಳೆಗೆ ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಇಂಧನ ದರ ಹೆಚ್ಚಳದಿಂದ ಸಂಸ್ಥೆಗಳನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ. ಹೀಗಾಗಿ ಡೀಸೆಲ್‌ನಿಂದ ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತಿಸಲಾಗುವುದು. ಇದರಿಂದ ನಿರ್ವಹಣೆ ಸುಲಭವಾಗಲಿದೆ. ಅಲ್ಲದೇ, ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ಇಲಾಖೆಯು ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ ಎಂದರು.

ಇನ್ನು, ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಎಂಟಿಸಿ ಸಂಸ್ಥೆಯು 90 ಎಲೆಕ್ಟ್ರಿಕ್‌ ಬಸ್‌ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಕಾರ್ಯಾಚರಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಫೇಮ್‌-2 ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗಿದೆ. ಈ ಪೈಕಿ 75 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಲ್ಲದೇ, ಸಿಇಎಸ್‌ಎಲ್‌ ಮೂಲಕ 921 ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಆದೇಶಿಸಲಾಗಿದೆ. ಬಸ್‌ಗಳ ಪ್ರತಿ ಕಿ.ಮೀ. ವೆಚ್ಚವು 54 ರು. ಆಗಿದೆ ಎಂದು ವಿವರಿಸಿದರು.

ಇದನ್ನು ಹೊರತುಪಡಿಸಿ, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಅಡಿಯಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳಿಗೆ  ಆರ್ಡರ್ ಮಾಡಲಾಗಿದೆ. ಹೆಚ್ಚುತ್ತಿರುವ ಡೀಸೆಲ್ ವೆಚ್ಚದೊಂದಿಗೆ, ಎಲೆಕ್ಟ್ರಿಕ್ ಬಸ್‌ಗಳಿಗೆ ಬದಲಾಯಿಸುವುದರಿಂದ ನಮಗೆ ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಇದು ಪರಿಸರ ಸ್ನೇಹಿಯಾಗಿದೆ ಎಂದು ಅವರು ಹೇಳಿದರು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಇಆರ್‌ಟಿಸಿ ಮತ್ತು ಎನ್‌ಡಬ್ಲ್ಯುಆರ್‌ಟಿಸಿ ಅಡಿಯಲ್ಲಿ ಪ್ರಸ್ತುತ 35,000 ಬಸ್‌ಗಳು ಸಂಚರಿಸುತ್ತಿವೆ. ಬಿಡ್‌ದಾರರೇ ಬಸ್‌ಗಳ ನಿರ್ವಹಣೆ ಮಾಡಬೇಕು ಎಂದರು. ಬಸ್ ಡಿಪೋಗಳು ಮತ್ತು ಬಸ್ ನಿಲ್ದಾಣಗಳನ್ನು ಸಂಬಂಧಪಟ್ಟ ನಿಗಮಗಳು ನಿರ್ವಹಿಸುತ್ತವೆ.  ಡೀಸೆಲ್ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀಗೆ ಸುಮಾರು 68.53 ರೂ.ಗಳಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳ ಬೆಲೆ ಪ್ರತಿ ಕಿ.ಮೀಗೆ 54 ರಿಂದ 64 ರೂ. ಇರುತ್ತದೆ.

ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಯಾವುದೇ ಯೋಜನೆ ಇಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ನಮ್ಮ ಎಲ್ಲಾ ಬಸ್ ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದ್ದಾರೆ, ಏಜೆನ್ಸಿಗಳು ಒಪ್ಪಂದದ ಮೇರೆಗೆ ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಚಾಲಕರು ಮತ್ತು ಕಂಡಕ್ಟರ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com