ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವಿಧಾನಸಭೆಯಲ್ಲಿ ತೀವ್ರ ಕೋಲಾಹಲ, ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳ ಅಸಹಜ, ಅನಿರೀಕ್ಷಿತ ಸಾವು ಪ್ರಕರಣ ಸರ್ಕಾರ ಮಟ್ಟದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದ್ದು, ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ ಸುಧಾಕರ್ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸಭೆ ಕಲಾಪದ ಸಾಂದರ್ಭಿಕ ಚಿತ್ರ
ವಿಧಾನಸಭೆ ಕಲಾಪದ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳ ಅಸಹಜ, ಅನಿರೀಕ್ಷಿತ ಸಾವು ಪ್ರಕರಣ ಸರ್ಕಾರ ಮಟ್ಟದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದ್ದು, ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ ಸುಧಾಕರ್ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿದ್ಯುತ್​ ವ್ಯತ್ಯಯದಿಂದ ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಿಮ್ಸ್​ನ ವೆಂಟಿಲೇಟರ್​ಗಳಲ್ಲಿ ಸಮಸ್ಯೆ ಉಂಟಾಗಿ ರೋಗಿಗಳು ನಿನ್ನೆ ಮೃತಪಟ್ಟ ವಿಚಾರ ವಿಧಾನಸೌಧದಲ್ಲಿ ಇಂದು ಬೆಳಗಿನ ಕಲಾಪದಲ್ಲಿ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಇದು ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳದಿದ್ದುದು ತಪ್ಪು. ಸರ್ಕಾರ ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ, ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ಪ್ರಕರಣದ ಬಗ್ಗೆ ನಮಗೂ ವಿಷಾದವಿದೆ. ಆದರೆ ಸಿದ್ದರಾಮಯ್ಯ ಅವರು ಬಳಸಿರುವ ಭಾಷೆಯನ್ನು ಒಪ್ಪಲು ಆಗುವುದಿಲ್ಲ ಎಂದು ಹೇಳಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಸಿದ್ದರಾಮಯ್ಯನವರು ಹೀಗೆ ಮಾತನಾಡುತ್ತಾರೆ, ಇಂಥ ಪದಗಳನ್ನು ಬಳಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಸರ್ಕಾರವೇ ಮಾಡಿರುವ ಕೊಲೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಮಾಧುಸ್ವಾಮಿ ಹೇಳಿದರು. ಕಾಂಗ್ರೆಸ್ ಸದಸ್ಯರಾದ ಕೃಷ್ಣ ಬೈರೇಗೌಡ, ಆರ್​.ವಿ.ದೇಶಪಾಂಡೆ ಮತ್ತಿತರರು ಸರ್ಕಾರವು ಮಾನವೀಯ ನಿಲುವಿನಿಂದ ಸಮಸ್ಯೆ ಗಮನಿಸಬೇಕು. ಹಟ ಸಲ್ಲದು ಎಂದರು. 

ಆರೋಗ್ಯ ಸಚಿವ ಡಾ ಸುಧಾಕರ್ ಅನಾರೋಗ್ಯ ಕಾರಣ ಕಲಾಪಕ್ಕೆ ಹಾಜರಾಗದ ಕಾರಣ ಅವರ ಪರವಾಗಿ ಉತ್ತರಿಸಿದ ಸಚಿವ ಶ್ರೀರಾಮುಲು, ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಐಸಿಯುನಲ್ಲಿ ಇದ್ದವರು ಕೇವಲ ವೆಂಟಿಲೇಟರ್ ವೈಫಲ್ಯದಿಂದಷ್ಟೇ ಮೃತಪಟ್ಟಿಲ್ಲ. ಅವರ ಸಾವಿಗೆ ಬೇರೆ ಕಾರಣಗಳು ಇವೆ. ರೋಗಿಗಳ ಆರೋಗ್ಯ ಸ್ಥಿತಿ ವ್ಯತ್ಯಯಗೊಂಡಿದ್ದರಿಂದ ಮೃತಪಟ್ಟರು. ನಾನು ಆಸ್ಪತ್ರೆಯ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.

ಆಗ ಸಚಿವ ಮಾಧುಸ್ವಾಮಿ, ವೆಂಟಿಲೇಟರ್ ಇರುವ ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ. ಇದನ್ನು ಸರ್ಕಾರದ ತಪ್ಪು ಎಂದು ಒಪ್ಪಿಕೊಂಡು ಪರಿಹಾರ ಘೋಷಿಸಲು ಅಗುವುದಿಲ್ಲ. ಪ್ರತಿಪಕ್ಷದ ನಾಯಕರ ಸಲಹೆಯಂತೆ ತನಿಖೆ ಮಾಡಿಸುತ್ತೇವೆ ಎಂದರು. ‘ಮಾನವೀಯ ದೃಷ್ಟಿಯಿಂದ ಪರಿಶೀಲಿಸಿ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ವಿಮ್ಸ್ ನಿರ್ದೇಶಕರು ಹೇಳುವುದು ಬೇರೆ: ಆದರೆ ಸರ್ಕಾರದ ಸಚಿವರ ಉತ್ತರಕ್ಕೆ ವ್ಯತಿರಿಕ್ತವಾಗಿ ವಿಮ್ಸ್ ನಿರ್ದೇಶಕರು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಆಗಾಗ ವಿದ್ಯುತ್ ಕೈಕೊಡುತ್ತದೆ, ಆಗ ಪರ್ಯಾಯ ವ್ಯವಸ್ಥೆಯಿರುತ್ತದೆ. ಮೂವರು ರೋಗಿಗಳು ಮೃತಪಟ್ಟಿದ್ದಾರೆ ಎಂದು ನಿರ್ದೇಶಕರು ಹೇಳಿದ್ದು ಸರ್ಕಾರ ಸರಿಯಾದ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆಯಾ ಎಂಬ ಸಂದೇಹ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com