ಎಫ್ ಡಿ ಎ ಹುದ್ದೆ ಕೊಡಿಸುವ ಆಮಿಷ: ಕಾಂಗ್ರೆಸ್ ಆರೋಪದ ನಂತರ ಮೈಸೂರು ಮಹಿಳಾ ಪಿಎಸ್ ಐ ಅಮಾನತು
ಮೈಸೂರು: ಮಹಿಳಾ ಪಿಎಸ್‌ಐ ಒಬ್ಬರು ಎಫ್‌ಡಿಎ ಹುದ್ದೆ ಕೊಡಿಸುವ ಭರವಸೆ ನೀಡಿ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಹಿರಂಗಪಡಿಸಿದ ನಂತರ, ನಗರ ಪೊಲೀಸ್ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.
ಎರಡು ದಿನಗಳ ಹಿಂದೆ ಲಕ್ಷ್ಮಣ್ ಅವರು ಎನ್‌ಆರ್ ಟ್ರಾಫಿಕ್ ಪೊಲೀಸ್ ಪಿಎಸ್‌ಐ ಅಶ್ವಿನಿ ಅನಂತಪುರ ಮತ್ತು ಉದ್ಯೋಗ ಆಕಾಂಕ್ಷಿ ಸಂಗಮೇಶ ಜಲಕಿ ನಡುವಿನ ಸಂಭಾಷಣೆಯ ಕ್ಲಿಪ್ ಅನ್ನು ಬಿಡುಗಡೆ ಮಾಡಿದರು, ಇದರಲ್ಲಿ ಪೊಲೀಸ್ ಅಧಿಕಾರಿಯು ಆಕಾಂಕ್ಷಿಗೆ ಹಣದ ವಿನಿಮಯಕ್ಕಾಗಿ ಉದ್ಯೋಗದ ಭರವಸೆ ನೀಡುವುದು ಕೇಳಿಬಂದಿದೆ.
ಲಕ್ಷ್ಮಣ್ ವಾಟ್ಸಾಪ್ ಚಾಟ್ ಹಿಸ್ಟರಿ, ಬ್ಯಾಂಕ್ ವಹಿವಾಟಿನ ವಿವರಗಳನ್ನೂ ಬಿಡುಗಡೆ ಮಾಡಿದ್ದರು. ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರು ಅಮಾನತು ಆದೇಶ ಹೊರಡಿಸಿದ್ದು, ಅಶ್ವಿನಿ ಅವರು ಪ್ರಧಾನ ಕಚೇರಿಯಿಂದ ಹೊರಬರದಂತೆ ಸೂಚಿಸಿದ್ದಾರೆ.
ಸೋಮವಾರ ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪರಿಷತ್ತಿನಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಧು ಸ್ವಾಮಿ, ಅನುಮತಿಸಲಾಗುವುದಿಲ್ಲ ಎಂದರು.
ಎಫ್‌ಡಿಎ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಆಡಿಯೋ, ವಾಟ್ಸ್ಆ್ಯಪ್ ಸಂದೇಶ ಮತ್ತು ಹಣ ವರ್ಗಾವಣೆ ದಾಖಲೆಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಆರೋಪ ಮಾಡಿದ್ದರು.
ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ