ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ವೇದಿಕೆ ಸಿದ್ದವಾಗುತ್ತಿದೆ. ಇದೇ ಸೋಮವಾರದಿಂದ ವಿಶ್ವವಿಖ್ಯಾತ ಮೈಸೂರು (Mysuru Dasara festival ) ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಈ ಬಾರಿ ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ವಿಶೇಷ.
ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಅವರನ್ನು ಸ್ವಾಗತಿಸಲು ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದ ವಿವರ ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 26 ರಂದು ಸೋಮವಾರ ಬೆಳಗ್ಗೆ 6:15ಕ್ಕೆ ರಾಷ್ಟ್ರಪತಿ ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ನೇರವಾಗಿ ಬೆಳಗ್ಗೆ 9 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ಬೆಳಗ್ಗೆ 10ಕ್ಕೆ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಬೆಳಗ್ಗೆ 11:15ಕ್ಕೆ ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಲಿದ್ದಾರೆ.
ಯುವ ದಸರಾ: ಮೈಸೂರು ದಸರಾದ ಮತ್ತೊಂದು ಪ್ರಮುಖ ಆಕರ್ಷಣೆ ಯುವ ದಸರಾ. ಅದಕ್ಕೆ ಈ ಬಾರಿ ಚಲನಚಿತ್ರ ನಟ ಕಿಚ್ಚ ಸುದೀಪ್ ಚಾಲನೆ ನೀಡಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರವರೆಗೆ 7 ದಿನ ಕಾಲ ನಡೆಯಲಿದ್ದು, ಸ್ಥಳೀಯ ಕಲಾವಿದರೊಂದಿಗೆ ಸ್ಯಾಂಡಲ್‌ವುಡ್, ಬಾಲಿವುಡ್ ಗಾಯಕರೊಂದಿಗೆ ತಾರೆಯರು ನೃತ್ಯ ಮತ್ತು ಗಾಯನದ ಮೂಲಕ ಮೋಡಿ ಮಾಡಲಿದ್ದಾರೆ. ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿ ಅಪ್ಪು ನಮನ ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು. ಮತ್ತೊಂದು ದಿನವನ್ನು ಮಹಿಳಾ ಕಲಾವಿದರ ನಾನಾ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ಗಜಪಡೆಗಳಿಗೆ ಮೂರನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ದಶಮಿ ದಿನ ಚಾಮುಂಡಿ ದೇವತೆಯನ್ನು ಹೊತ್ತು ಸಾಗುವ ಗಜ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಸಿಡಿಮದ್ದು, ಫಿರಂಗಿ ತಾಲೀಮು ನೀಡುವುದು ಪ್ರಮುಖ ಘಟ್ಟ, ಮೊನ್ನೆ 16ನೇ ತಾರೀಖಿನಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು, ಗಜಪಡೆ, ಅಶ್ವಗಳು ಯಾವುದೂ ವಿಚಲಿತವಾಗದೇ, ತಾಲೀಮಿನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದವು.
ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಅವು ಶಬ್ದಗಳಿಗೆ ಹೊಂದಿಕೊಳ್ಳಲು ಅನುಕೂಲವಾಗಲೆಂದು ತಾಲೀಮು ನಡೆಸಲಾಗುತ್ತಿದ್ದು, ವಸ್ತು ಪ್ರದರ್ಶನ ಮೈದಾನದ ವಾಹನ ನಿಲುಗಡೆ ಸ್ಥಳದಲ್ಲಿ ಮೂರು ಸುತ್ತಿನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿದ್ದು, ಇದಕ್ಕೆ ತಕ್ಕ ಸಿದ್ಧತೆಯನ್ನು ಮೊದಲೇ ಮಾಡಿಕೊಳ್ಳಲಾಗಿತ್ತು.
ಸೆ.12ರಂದು ಮೊದಲ ಸಿಡಿಮದ್ದು ಸಿಡಿಸುವ ತಾಲೀಮು ನಡೆದಿತ್ತು. ಆ ವೇಳೆ ಕುದುರೆಗಳು, ಮೂರು ಆನೆಗಳು ಬೆಚ್ಚಿದ್ದವು. ಆದರೆ ಈ ಬಾರಿ ಶಬ್ದಗಳಿಗೆ ಯಾವುದೂ ವಿಚಲಿತವಾಗದೆ ಸುಮ್ಮನೆ ನಿಂತಿದ್ದವು. ತಾಲೀಮಿನಲ್ಲಿ 41 ಕುದುರೆಗಳು, 12 ಆನೆಗಳು ಭಾಗಿಯಾಗಿತ್ತು. ಸಿಡಿಮದ್ದು ಒಟ್ಟಾರೆ 92.2ಡೆಸಿಬಲ್ ಸರಾಸರಿ ಇರುತ್ತದೆ. ಇಂದು ಮೂರನೆ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದೆ.
Advertisement