ಪ್ರಮೋದಾದೇವಿ ಒಡೆಯರ್ ಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಮಂಡಿಯೂರಿ ನಮಸ್ಕಾರ: ವೈರಲ್ ಫೋಟೋ ಹಿಂದಿನ ಅಸಲಿ ಕಥೆ?

ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್  ಮುಂದೆ  ಇನ್ಫೋಸಿಸ್  ಮುಖ್ಯಸ್ಥೆ ಸುಧಾಮೂರ್ತಿ ಮಂಡಿಯೂರಿ ನಮಸ್ಕರಿಸುತ್ತಿರುವ ಫೋಟೊ ಈಗ ವೈರಲ್ ಆಗಿದೆ.
ಪ್ರಮೋದಾ ದೇವಿಗೆ ನಮಸ್ಕರಿಸುತ್ತಿರುವ ಸುಧಾಮೂರ್ತಿ
ಪ್ರಮೋದಾ ದೇವಿಗೆ ನಮಸ್ಕರಿಸುತ್ತಿರುವ ಸುಧಾಮೂರ್ತಿ

ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್  ಮುಂದೆ  ಇನ್ಫೋಸಿಸ್  ಮುಖ್ಯಸ್ಥೆ ಸುಧಾಮೂರ್ತಿ ಮಂಡಿಯೂರಿ ನಮಸ್ಕರಿಸುತ್ತಿರುವ ಫೋಟೊ ಈಗ ವೈರಲ್ ಆಗಿದೆ. ಸುಧಾಮೂರ್ತಿ ರಾಜಮನೆತನದವರ ಮುಂದೆ ಈ ರೀತಿ ತಲೆಬಾಗುತ್ತಿರುವುದು ಸರಿಯೇ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಮಕ್ಕಳ ಮನಸ್ಸಿನಲ್ಲಿ ತಪ್ಪು ಮೌಲ್ಯಗಳನ್ನು  ತುಂಬಬಾರದು ಎಂದು ಟ್ವಿಟ್ಟರ್ ನಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸುಧಾ ಮೂರ್ತಿ ಅವರ ಫೋಟೋ ಹಾಕಲಾಗಿದೆ.  ಎಸ್.ಶ್ಯಾಮ್ ಪ್ರಸಾದ್ ಎಂಬ ಟ್ವೀಟಿಗರು ಸುಧಾಮೂರ್ತಿ ಮೈಸೂರು ರಾಜವಂಶಸ್ಥರ ಮುಂದೆ ತಲೆಬಾಗಿ ನಮಸ್ಕರಿಸುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶಾಂತರಾಜ್ ಎಂಬುವವರು ಸುಧಾ ಮೂರ್ತಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಪುಸ್ತಕಗಳು ಅನೇಕ ಮಹಿಳೆಯರಿಗೆ ಪ್ರೇರಣೆಯಾಯಿತು. ರಾಜಮನೆತನಕ್ಕೆ ಆಕೆಯ ಸಾಷ್ಟಾಂಗ ಪ್ರಣಾಮವು ಭಾವನಾತ್ಮಕ ಅಭಿವ್ಯಕ್ತಿಯಾಗಿದೆ.ಅವರು ಮೈಸೂರು ರಾಜಮನೆತನಕ್ಕಿಂತ ಹೆಚ್ಚು ರಾಜಮನೆತನದವರಾಗಿದ್ದಾರೆ ಎಂದಿದ್ದಾರೆ.

ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೈಸೂರ್ ಮೀಮ್ಸ್ ಎಂಬ ಟ್ವಿಟರ್ ಹ್ಯಾಂಡಲ್​​ನಲ್ಲಿ ಈ ಫೋಟೋ ಅಪ್ಲೋಡ್ ಆಗಿದೆ. ಶ್ರೇಷ್ಠತೆ ಸರಳತೆಯಲ್ಲಿದೆ. ಮೈಸೂರು ಅರಮನೆಯಲ್ಲಿ ಪ್ರಮೋದಾ ದೇವಿ ಒಡೆಯರ್ ಆಶೀರ್ವಾದ ಪಡೆಯುತ್ತಿರುವ ಸುಧಾಮೂರ್ತಿ ಎಂದು ಈ ಫೋಟೊಗೆ  ಶೀರ್ಷಿಕೆ ನೀಡಲಾಗಿದೆ. 2019 ಜುಲೈ 18ರಂದು ಈ ಫೋಟೊ ಅಪ್ಲೋಡ್ ಆಗಿದೆ.

ಈ ಫೋಟೋ ಬಗ್ಗೆ ಮತ್ತಷ್ಟು ಹುಡುಕಾಡಿದಾಗ ಸ್ಟಾರ್ ಆಫ್ ಮೈಸೂರ್ ವೆಬ್​​ಸೈಟಿನಲ್ಲಿ ಪ್ರಕಟವಾದ ವರದಿಯಲ್ಲಿ ಈ ಚಿತ್ರವಿದೆ. ಈ ಸುದ್ದಿ ಪ್ರಕಾರ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಸಮಾರಂಭದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಒಂಬತ್ತು ಮಂದಿಗೆ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿ ಪಡೆದವರಲ್ಲಿ ಸುಧಾ ಮೂರ್ತಿ ಕೂಡಾ ಒಬ್ಬರು. ಸ್ಟಾರ್ ಆಫ್ ಮೈಸೂರ್ ವರದಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಆಶೀರ್ವಾದವನ್ನು ಪಡೆಯುತ್ತಿರುವುದು. ನಟಿ ಬಿ.ಸರೋಜಾದೇವಿಯನ್ನೂ ಚಿತ್ರದಲ್ಲಿ ಕಾಣಬಹುದು ಎಂದು ಸುಧಾಮೂರ್ತಿ ಅವರ ಫೋಟೊಗೆ ಶೀರ್ಷಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com