
ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಈ ಬಾರಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ಮತ್ತು ಚಲನಚಿತ್ರ ತಾರೆಯರ ವಿವರಗಳನ್ನು ಸಂಗ್ರಹಿಸಿ ಅವರಿಗೆ ನೀಡುವ ಸಂಭಾವನೆಯನ್ನು ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಚುನಾವಣಾ ವೆಚ್ಚದ ಅಡಿಯಲ್ಲಿ ತರುವಂತೆ ಕೋರಿ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ನಿನ್ನೆ ಮಂಗಳವಾರ ಮನವಿ ಸಲ್ಲಿಸಿ, ‘ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಕರೆತರುವ ಪರಿಪಾಠ ಚಾಲ್ತಿಯಲ್ಲಿದೆ. ''ಅಭ್ಯರ್ಥಿ ಮತ್ತು ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಸೆಲೆಬ್ರಿಟಿಗಳು ಮತ್ತು ಸಿನಿಮಾ ತಾರೆಯರು ಪ್ರಭಾವ ಮತ್ತು ಹಣದಿಂದ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದು ಮತದಾರರ ನಂಬಿಕೆ, ಚುನಾವಣಾ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕನ್ನಡ ನಟರಷ್ಟೇ ಅಲ್ಲ, ಕರ್ನಾಟಕ ರಾಜಕೀಯದಲ್ಲಿ ಆಸಕ್ತಿ ಇಲ್ಲದ ತೆಲುಗು ಚಿತ್ರರಂಗದ ತಾರೆಯರನ್ನು ಕೂಡ ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿ ಪ್ರದೇಶಗಳಲ್ಲಿ ಪ್ರಚಾರಕ್ಕೆ ಕರೆಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಈ ತಾರೆಯರಿಗೆ ಕಪ್ಪುಹಣ ನೀಡಲಾಗುತ್ತಿದ್ದು, ಅದು ಲೆಕ್ಕಕ್ಕೆ ಬಾರದೆ ಇರುವುದರಿಂದ ಚುನಾವಣಾ ಆಯೋಗವು ಅಂತಹ ತಾರೆಯರ ವಿವರಗಳನ್ನು ಸಂಗ್ರಹಿಸಿ, ಪ್ರಚಾರಕ್ಕೆ ಕರೆತಂದ ಅಭ್ಯರ್ಥಿಯ ಚುನಾವಣಾ ವೆಚ್ಚವಾಗಿ ಅವರಿಗೆ ನೀಡುವ ಸಂಭಾವನೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ನಟರು ಅಂತಹ ಆದಾಯವನ್ನು ಬಹಿರಂಗಪಡಿಸುವುದಿಲ್ಲ, ಇದರಿಂದ ತೆರಿಗೆ ವಂಚನೆಯಾಗಲಿರುವುದರಿಂದ ಸಂಭಾವನೆಯ ವಿವರವನ್ನು ಆದಾಯ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ರಘು ಜಾಣಗೆರೆ ಆಗ್ರಹಿಸಿದ್ದಾರೆ.
Advertisement