ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ಬೊಮ್ಮಾಯಿ: ಆಕಸ್ಮಿಕವಾಗಿ ಸಿಕ್ಕ ರಿಷಬ್ ಶೆಟ್ಟಿ ಬಗ್ಗೆ ಸಿಎಂ ಹೇಳಿದ್ದೇನು?
ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿಯವರ ದೇವಾಲಯ ದರ್ಶನ ಮುಂದುವರಿದಿದೆ. ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಕುಟುಂಬದವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮುಖ್ಯಮಂತ್ರಿಗಳು ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಸಹ ಕುಟುಂಬದವರೊಂದಿಗೆ ಹೋಗಿ ದೇವಿಯ ದರ್ಶನ ಪಡೆದಿದ್ದಾರೆ.
ಇಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚಿತ್ರನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಕಾಣಿಸಿಕೊಂಡರು. ರಿಷಬ್ ಮುಖ್ಯಮಂತ್ರಿಗಳನ್ನು ಕಂಡಕೂಡಲೇ ಪಾದಮುಟ್ಟಿ ನಮಸ್ಕರಿಸಿದರು.ಈ ವೇಳೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಕರಾವಳಿಯ ಸ್ಥಳೀಯ ನಾಯಕರು ಇದ್ದರು.
ಸಿಎಂ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ: ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೈಂದೂರು ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದು ಅರೆಶಿರೂರು ಹೆಲಿಪ್ಯಾಡ್ ಮೂಲಕ ಸಿಎಂ ಕೊಲ್ಲೂರಿಗೆ ತೆರಳಿದರು.
ಬಿಜೆಪಿ ಪರ ರಿಷಬ್ ಶೆಟ್ಟಿ ಪ್ರಚಾರ?: ಕೆಲ ದಿನಗಳ ಹಿಂದೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಈ ಬಾರಿ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು, ಇದೀಗ ಕಾಂತಾರ ಚಿತ್ರದ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸಿರುವ ರಿಷಬ್ ಶೆಟ್ಟಿ ಕೂಡ ಕೇಸರಿ ಪಡೆ ನಾಯಕರ ಪ್ರಚಾರಕ್ಕೆ ಬರುತ್ತಾರೆಯೇ ಎಂಬ ಅನುಮಾನ ದಟ್ಟವಾಗಿದೆ.
ಈ ಬಗ್ಗೆ ಕೊಲ್ಲೂರಿನಲ್ಲಿಂದು ಮಾತನಾಡಿರುವ ಸಿಎಂ ಬೊಮ್ಮಾಯಿ, ನಟ ರಿಷಬ್ ಶೆಟ್ಟಿಯವರು ನಮ್ಮ ಪಕ್ಷದ ತತ್ವ, ಸಿದ್ಧಾಂತಕ್ಕೆ ಬಹಳ ಹತ್ತಿರವಾಗಿದ್ದಾರೆ. ನಮ್ಮ ಸಿದ್ಧಾಂತವನ್ನು ಬಹಿರಂಗವಾಗಿ ಪ್ರತಿಪಾದನೆ ಮಾಡಿದವರು. ಅವರ ವಿಚಾರಗಳು ಹಾಗಿವೆ. ಇಲ್ಲಿಗೆ ಬರುವವರೆಗೆ ರಿಷಬ್ ಶೆಟ್ಟಿಯವರು ಇರುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ, ಆಶ್ಚರ್ಯವಾಯಿತು ಎಂದರು.