ಬೆಳಗಾವಿ: ರಾಜಕೀಯದಲ್ಲಿ ಶಾಶ್ವತ ಮಿತ್ರರು ಇರುವುದಿಲ್ಲ, ಶತ್ರುಗಳೂ ಇರುವುದಿಲ್ಲ ಎಂಬ ಮಾತಿದೆ, ಬಹಿರಂಗವಾಗಿ ಕಿತ್ತಾಡಿಕೊಂಡವರು, ಟೀಕೆ, ಆರೋಪಗಳನ್ನು ಪುಂಖಾನುಪುಂಖವಾಗಿ ಮಾಡಿದವರು ಮರುದಿನ ಕೈ ಕೈ ಹಿಡಿದುಕೊಂಡು, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಿದ್ದನ್ನು ನೋಡಿರುತ್ತೇವೆ.
ಈಗ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯ.ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿ ಇಡೀ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಬಿಂಬಿಸಿತ್ತು. ಇನ್ನು ನಿನ್ನೆಯಷ್ಟೇ ಬೆಳಗಾವಿಯ ಕಾಗವಾಡದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ಆರೋಪಿಸಿದ್ದರು.
ಆದರೆ ಇಂದು ಹಾಲಿ ಮತ್ತು ಮಾಜಿ ಸಿಎಂಗಳು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಖುಷಿಯಿಂದ ನಗುತ್ತಾ ಕೈ ಕೈ ಕುಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯನವರು ಪ್ರೀತಿಯಿಂದ ಬಸವರಾಜ ಬೊಮ್ಮಾಯಿಯವರ ಹೆಗಲು ತಟ್ಟಿದ್ದಾರೆ. ಇದು ನೋಡುಗರಿಕೆ ಒಂದು ಕ್ಷಣ ಅಚ್ಚರಿ ಮತ್ತು ಮುಖದಲ್ಲಿ ನಗು ತರಿಸಿದ್ದಂತೂ ಸುಳ್ಳಲ್ಲ.
Advertisement