ಆಗಸ್ಟ್ 5ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ; ಇಂದಿನಿಂದ ಫಲಾನುಭವಿಗಳಿಗೆ ಶೂನ್ಯ ಬಿಲ್: ಸಚಿವ ಕೆ ಜೆ ಜಾರ್ಜ್

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 5ರಂದು ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.
ಕೆ ಜೆ ಜಾರ್ಜ್
ಕೆ ಜೆ ಜಾರ್ಜ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 5ರಂದು ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜುಲೈ ತಿಂಗಳ 200 ಯೂನಿಟ್ ಯೊಳಗೆ ಬಳಸಿದ ಯಾವುದೇ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸುವಂತಿಲ್ಲ. ಅವರಿಗೆ ಆಗಸ್ಟ್ ತಿಂಗಳು ಈ ವಾರದಲ್ಲಿ ಬರುವ ಬಿಲ್ ನಲ್ಲಿ ಶೂನ್ಯ ಮೊತ್ತ ಎಂದು ದಾಖಲಾಗಿರುತ್ತದೆ ಎಂದರು.

1 ಕೋಟಿ 43 ಲಕ್ಷ ಗ್ರಾಹಕರು ಅರ್ಜಿ: ಶೇ.10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ನ್ನು ಗ್ರಾಹಕರಿಗೆ ಕೊಡುವ ಉದ್ದೇಶದಿಂದ ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿದ್ದು, ಈ ಯೋಜನೆಗೆ 1 ಕೋಟಿ 43 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ (Gruha jyothi scheme )ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಖರ್ಗೆ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. 

ಎಸ್ಕಾಂಗಳಲ್ಲಿಂದಲೂ 200 ಯುನಿಟ್​ ಒಳಗೆ ವಿದ್ಯುತ್​ ಬಳಸಿದ ಗ್ರಾಹಕರಿಗೆ ಶೂನ್ಯ ಬಿಲ್​ ನೀಡುವ ಪ್ರಕ್ರಿಯೆ ಆರಂಭ ಆಗಿದೆ ಎಂದು ಸುದ್ದಿಗಾರರಿಗೆ ಶೂನ್ಯ ಬಿಲ್ ಪ್ರದರ್ಶಿಸಿದರು. ಮುಂದಿನ ತಿಂಗಳು 200 ಯೂನಿಟ್ ಗೂ ಅಧಿಕ ಬಿಲ್ ಬಂದರೆ ಪೂರ್ಣ ಪ್ರಮಾಣದ ಬಿಲ್​ ನ್ನು ಗ್ರಾಹಕರು ಪಾವತಿಸಬೇಕು. ಮುಂದೆ ಈ ರೀತಿಯ ಗ್ರಾಹಕರಿಗೆ ಏನು ಮಾಡಬೇಕು ಎನ್ನುವುದನ್ನು ಸಚಿವ ಸಂಪುಟದಲ್ಲಿ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಜುಲೈ 27ರೊಳಗೆ ಅರ್ಜಿ ಸಲ್ಲಿಸಿದವರಿಗೆ ಉಚಿತ ವಿದ್ಯುತ್: ಕರ್ನಾಟಕದಲ್ಲಿ 2 ಕೋಟಿ 16 ಲಕ್ಷ ಆರ್ ಆರ್ ನಂಬರ್ ಇವೆ. ಈ ಪೈಕಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಗಿಂತಲೂ ಕಡಿಮೆ ಬಳಕೆ ಮಾಡುತ್ತಿದ್ದಾರೆ. ಒಬ್ಬೊಬ್ಬರು ಎರಡ್ಮೂರು ಬಾರಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಇದುವರೆಗೂ ನೋಂದಣಿ ಮಾಡಿಕೊಳ್ಳದವರಿಗೆ ಇನ್ನೂ ಕಾಲಾವಕಾಶ ಇದೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದ್ದವರು ಜುಲೈ ತಿಂಗಳ ಬಿಲ್ ಪಾವತಿಸಬೇಕು ಎಂದು ಹೇಳಿದರು.

ನೋಂದಣಿಗೆ ಕೊನೆಯ ದಿನಾಂಕ ನಿಗದಿ ಮಾಡಿಲ್ಲ: ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಇದ್ದಾರೆ, ಅಂಥವರು ಇನ್ನೂ ನೋಂದಣಿ ಮಾಡಲು ಅವಕಾಶ ಇದೆ. ನೋಂದಣಿ ಮಾಡುವ ಕೊನೆಯ ದಿನಾಂಕವನ್ನು ನಿರ್ಧಾರ ಮಾಡಿಲ್ಲ.  ಈ ನಿಟ್ಟಿನಲ್ಲಿ ಅರ್ಹತೆ ಉಳ್ಳವರು ಲಾಭ ಪಡೆದುಕೊಳ್ಳಬಹುದು ಎಂದರು.

ಇಂಧನ ಇಲಾಖೆಗೆ ಯಾವುದೇ ಹೊರೆ ಇಲ್ಲ. ಯೋಜನೆಗೆ ಆಗುವ ವೆಚ್ಚವನ್ನು ಸರ್ಕಾರ ಇಲಾಖೆಗೆ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಜಾರ್ಜ್ ತಿಳಿಸಿದರು.

ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರು ಫಲಾನುಭವಿಗಳು 200 ಯೂನಿಟ್ ದಾಟಿದರೆ ಅವರು ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂದರು.

ಆಗಸ್ಟ್ ತಿಂಗಳಲ್ಲಿ 22ರೊಳಗೆ ಅರ್ಜಿ ಸಲ್ಲಿಸಬೇಕು: ಗೃಹ ಜ್ಯೋತಿ ಪ್ರಯೋಜನ ಪಡೆದುಕೊಳ್ಳಲು ಅಂತಿಮ ಗಡುವು ನಿಗದಿಪಡಿಸದಿದ್ದರೂ ಆಗಸ್ಟ್ ತಿಂಗಳಲ್ಲಿ 22ರೊಳಗೆ ಅರ್ಜಿ ಸಲ್ಲಿಸದಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಆಗಸ್ಟ್ ಬಿಲ್ ನಲ್ಲಿ ಶೂನ್ಯ ಬಿಲ್ ಎಂದು ಬರುವುದಿಲ್ಲ. ಗ್ರಾಹಕರು ಸಂಪೂರ್ಣ ಪಾವತಿ ಮಾಡಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com