ಶಕ್ತಿ ಸೌಧದಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ; ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ: ಯು.ಟಿ. ಖಾದರ್‌

ಶಾಸಕರ ಭವನ ಸೇರಿದಂತೆ ವಿಧಾನಸೌಧ ಆವರಣ ಹಾಗೂ ಸುತ್ತಮುತ್ತ ಆಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಂಗಳವಾರ ಹೇಳಿದ್ದಾರೆ.
ಯು.ಟಿ ಖಾದರ್
ಯು.ಟಿ ಖಾದರ್
Updated on

ಬೆಂಗಳೂರು: ಶಾಸಕರ ಭವನ ಸೇರಿದಂತೆ ವಿಧಾನಸೌಧ ಆವರಣ ಹಾಗೂ ಸುತ್ತಮುತ್ತ ಆಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಂಗಳವಾರ ಹೇಳಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಕ್ಯಾಂಪಸ್‌ಗೆ ಆಧುನಿಕ ಭದ್ರತಾ ವ್ಯವಸ್ಥೆ ಅಗತ್ಯವಿದೆ ಮತ್ತು ನಾವು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ವ್ಯವಸ್ಥೆ ಶೀಘ್ರವಾಗಿ ಜಾರಿಗೆ ತರಲು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಐಟಿ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಖಾದರ್ ಹೇಳಿದರು.

ವಿಧಾನಸಭೆಯ ಒಳಗಿನ ಭದ್ರತೆಯ ಕುರಿತು ಅವರು, ಶಾಸಕರಿಗೆ ಮಾತ್ರವಲ್ಲ, ಕ್ಯಾಂಪಸ್‌ಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಇದನ್ನು ಮಾಡಬೇಕು, ಆದರೆ ಜನರಿಗೆ ತೊಂದರೆಯಾಗದಂತೆ ಮಾಡಬೇಕು. ವಿಧಾನಸೌಧ ಪ್ರವೇಶಿಸಲು ಸಾಮಾನ್ಯ ಜನರು ಸಾಕಷ್ಟು ಸಮಯ ವ್ಯಯಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಶಕ್ತಿಸೌಧದೊಳಗೆ 10 ನಿಮಿಷಗಳ ಕಾಲ ಕೆಲಸ ಮಾಡಲು, ಅನುಮತಿ ಪಡೆಯಲು ಇಡೀ ದಿನವನ್ನು ಕಳೆಯಬೇಕಾಗಿದೆ.

ವಿಧಾನಸೌಧ, ವಿಕಾಸಸೌಧಕ್ಕೆ ಕೆಲಸದ ನಿಮಿತ್ತ ಭೇಟಿ ನೀಡುವ ಸಾರ್ವಜನಿಕರು ತಾವು ಯಾರನ್ನು ಭೇಟಿಯಾಗಬೇಕು, ಭೇಟಿಯ ಉದ್ದೇಶ ಏನು ಎಂಬ ವಿವರಗಳನ್ನು ಮನೆಯಲ್ಲೇ ಕುಳಿತು ಹೊಸದಾಗಿ ರೂಪಿಸಲಾಗುತ್ತಿರುವ ಪೋರ್ಟಲ್‌ನಲ್ಲಿ ನಮೂದಿಸಿದರೆ ಸಾಕು. ಭೇಟಿಯಾಗಬೇಕಾದ ಸಚಿವರು, ಅಧಿಕಾರಿಗಳ ಲಭ್ಯತೆಯ ಆಧಾರದಲ್ಲಿ ದಿನ, ಸಮಯ ನೀಡಲಾಗುತ್ತದೆ. ಈ ಕುರಿತು ಪೊಲೀಸ್‌, ತಾಂತ್ರಿಕ ಕ್ಷೇತ್ರದ ಪರಿಣತರು, ವಿಧಾನಸೌಧದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ನೂತನ ವ್ಯವಸ್ಥೆ ಶೀಘ್ರ ಜಾರಿಗೊಳಿಸಲಾಗುವುದು ಎಂದರು.

ಅಸೆಂಬ್ಲಿ, ಕಾರ್ಯದರ್ಶಿ ಮಟ್ಟದಲ್ಲಿ ಮತ್ತು ಗ್ರಂಥಾಲಯದಲ್ಲಿ ನಡಾವಳಿಗಳು ಸೇರಿದಂತೆ ಇಡೀ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಬಗ್ಗೆಯೂ ಅವರು ಯೋಚಿಸುತ್ತಿರುವುದಾಗಿ ತಿಳಿಸಿದರು.  ಸದನದ ಕಲಾಪಕ್ಕಾಗಿ ವಿಶೇಷ ಟಿವಿ ಚಾನೆಲ್ ಪ್ರಸ್ತಾಪವನ್ನು ಅವರು ತಿರಸ್ಕರಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬಿಜೆಪಿ ನೇಮಕ ಮಾಡದಿರುವ ಬಗ್ಗೆ ಸ್ಪೀಕರ್, ಇದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು. ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಸ್ಪೀಕರ್ ಆಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಾದರ್ ಅವರು ಇತ್ತೀಚಿನ ಅಧಿವೇಶನದಲ್ಲಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಖಾದರ್ ಅವರು ತಮ್ಮ ಕನ್ನಡದ ಬಗ್ಗೆ ಜನ ಟ್ರೋಲ್ ಮಾಡುತ್ತಿರುವುದಕ್ಕೆ ಬೇಸರವಿಲ್ಲ ಎಂದಿದ್ದಾರೆ. ಅದು ನನ್ನ ಕನ್ನಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. "ಜನರೊಂದಿಗೆ ಸಂಪರ್ಕದಲ್ಲಿರುವುದು ನನ್ನ ಮೊದಲ ಆದ್ಯತೆಯಾಗಿದೆ ಮತ್ತು ನಾನು ನನ್ನ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ಕೆಲವೊಮ್ಮೆ  ದ್ವಿಚಕ್ರ ವಾಹನಗಳಲ್ಲಿ ಸಹ ಪ್ರಯಾಣಿಸುತ್ತೇನೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com