ನಾನು ಎಲ್ಲವನ್ನು 'ವಾಸ್ತು ಪ್ರಕಾರ'ವೇ ಮಾಡಿದ್ದೇನೆ, ನೀವು ಕೂಡ ಅದನ್ನೇ ಅನುಸರಿಸಿ: ಜಿಲ್ಲಾಧಿಕಾರಿಗೆ ಎಚ್.ಡಿ ರೇವಣ್ಣ ಸಲಹೆ

ಮೂಢನಂಬಿಕೆ ಮತ್ತು ಜ್ಯೋತಿಷ್ಯವನ್ನು ಬಲವಾಗಿ ನಂಬುವ ಮಾಜಿ ಸಚಿವ ಎಚ್.ಡಿ ರೇವಣ್ಣ ವಾಸ್ತು ಪ್ರಕಾರವೇ ವಿದ್ಯುತ್ ಪೂರೈಕೆ ಕೇಂದ್ರ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಸೂಚನೆ ನೀಡಿದ್ದಾರೆ.
ಎಚ್.ಡಿ ರೇವಣ್ಣ
ಎಚ್.ಡಿ ರೇವಣ್ಣ

ಹಾಸನ: ಮೂಢನಂಬಿಕೆ ಮತ್ತು ಜ್ಯೋತಿಷ್ಯವನ್ನು ಬಲವಾಗಿ ನಂಬುವ ಮಾಜಿ ಸಚಿವ ಎಚ್.ಡಿ ರೇವಣ್ಣ ವಾಸ್ತು ಪ್ರಕಾರವೇ  ವಿದ್ಯುತ್ ಪೂರೈಕೆ ಕೇಂದ್ರ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಸೂಚನೆ ನೀಡಿದ್ದಾರೆ.

ಹಾಸನದಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಕೇಂದ್ರವನ್ನು ವಾಸ್ತು ಪ್ರಕಾರ ಅಳವಡಿಸಿ. ಹತ್ತಾರು ಜನ ಆಸ್ಪತ್ರೆಯಲ್ಲಿ ಉಳಿಯುವುದರಿಂದ ವಾಸ್ತು ಪ್ರಕಾರವೇ ಕೆಲಸ ಮಾಡಿ ಎಂದು ಶಾಸಕ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪರಿಶೀಲನಾ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ನಾನು ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ. ವಾಸ್ತುವನ್ನು ಕಟ್ಟುನಿಟ್ಟಾಗಿ ಅನುಸರಿಸಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಮ್ಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಹಾಗಾಗಿ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಉಪಕೇಂದ್ರ ಸ್ಥಾಪಿಸುವಾಗ ವಾಸ್ತು ಪ್ರಕಾರವ್ ನಿರ್ಮಿಸಿ, ಏಕೆಂದರೆ ನಿತ್ಯ ನೂರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದಿದ್ದಾರೆ.

ಅವರ ಪುತ್ರ ಸಂಸದ ಪ್ರಜ್ವಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಬಾಮಾ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿದ್ದರೂ ಯಾರೋಬ್ಬರು ಅವರ ಸಲಹೆಗೆ ಪ್ರತಿಕ್ರಿಯಿಸಲಿಲ್ಲ.

ಮೊದಲ ಬಾರಿಗೆ ಹೆಚ್.ಡಿ.ರೇವಣ್ಣ ಅವರು ಎಲ್ಲಾ ವಿಷಯಗಳಲ್ಲಿ ವಾಸ್ತು ಅನುಸರಿಸುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಹೆಚ್.ಡಿ.ರೇವಣ್ಣ ಕೂಡ ಪ್ರತಿದಿನ ಬೆಳಗ್ಗೆ ಎದ್ದ ನಂತರ, ಮನೆಯಿಂದ ಹೊರಡುವುದು, ವಾಹನ ಹತ್ತುವುದು, ದೇವಸ್ಥಾನ ಪ್ರವೇಶ, ಸಭೆಗಳ ನೇತೃತ್ವ ವಹಿಸುವುದರಿಂದ ತಮ್ಮ ಕುಟುಂಬದ ಪುರೋಹಿತರು ಮತ್ತು ಜ್ಯೋತಿಷಿಗಳ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ರೇವಣ್ಣ ಅನೇಕ ಸಂದರ್ಭಗಳಲ್ಲಿ ಬರಿಗಾಲಲ್ಲಿ ಅಧಿಕಾರಿಗಳ  ಸಭೆಗಳಿಗೆ ಹಾಜರಾಗುತ್ತಾರೆ. ರೇವಣ್ಣ ಅವರು ತಮ್ಮ ವಾಹನ ಹತ್ತುವಾಗ ಮತ್ತು ಇಳಿಯುವಾಗ ಜ್ಯೋತಿಷಿಗಳ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದು ಹೇಳಲಾಗುತ್ತದೆ.

ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲವು ನಿಮಿಷಗಳ ಕಾಲ ವಾಹನದ ಒಳಗೆ ಕುಳಿತು ಶುಭಕಾಲದಲ್ಲಿ ಕೆಳಗೆ ಇಳಿಯುತ್ತಾರೆ.  ರೇವಣ್ಣ ಅವರು ಚುನಾವಣಾ ಕಚೇರಿ ಪ್ರವೇಶಿಸುವಾಗ ಹಾಗೂ ನಾಮಪತ್ರ ಸಲ್ಲಿಸುವಾಗ ವಾಸ್ತು ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಎಲ್ಲವೂ ಜ್ಯೋತಿಷಿಗಳ ಸಲಹೆಯಂತೆಯೆ ನಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com