ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಟ: ದೇವಾಲಯಗಳ ಜೀರ್ಣೋದ್ದಾರ ಅನುದಾನಗಳಿಗೆ ತಡೆ; ಹಿಂದೂ ಸಂಘಟನೆಗಳ ಆಕ್ರೋಶ

ಪಂಚ ಗ್ಯಾರಂಟಿ  ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿರುವ ಸರ್ಕಾರ ಇದೀಗ ರಾಜ್ಯದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಘೋಷಿಸಲಾದ ಅನುದಾನವನ್ನು ತಡೆಹಿಡಿಯಲಾಗಿದೆ. ಇದು ಹಿಂದು ಸಂಘಟನೆಗಳ  ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸೌಧ
ಕರ್ನಾಟಕ ವಿಧಾನಸೌಧ

ಬೆಂಗಳೂರು: ಪಂಚ ಗ್ಯಾರಂಟಿ  ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿರುವ ಸರ್ಕಾರ ಇದೀಗ ರಾಜ್ಯದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಘೋಷಿಸಲಾದ ಅನುದಾನವನ್ನು ತಡೆಹಿಡಿಯಲಾಗಿದೆ. ಇದು ಹಿಂದು ಸಂಘಟನೆಗಳ  ಆಕ್ರೋಶಕ್ಕೆ ಕಾರಣವಾಗಿದೆ.

2022-23ನೇ ಸಾಲಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಿಡುಗಡೆಯಾದ ಅನುದಾನವನ್ನು ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ  ಹೊರಡಿಸಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆಯನ್ನು ನೀಡಲಾಗಿದೆ.

ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ಸೂಚಿಸಿದೆ. ಇನ್ನು ಶೇ‌.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ಅದನ್ನು ತಕ್ಷಣ ತಡೆ ಹಿಡಿದು ಅನುದಾನ ಬಿಡುಗಡೆ ಮಾಡದಂತೆ ಸೂಚನೆ ನೀಡಲಾಗಿದೆ.

ಅನುದಾನದ ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯುವುದು. ಹೀಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೂರು ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

ದೇವಸ್ಥಾನಗಳ ಅನುದಾನ ಬಿಡುಗಡೆಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ದೇವಸ್ಥಾನಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆ, ಸಂಸ್ಕೃತಿಯನ್ನು ರೂಪಿಸುವಲ್ಲಿ ಅವುಗಳ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಇದನ್ನು ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿದ್ದು ಆಕ್ಷೇಪಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಜತೆಗೆ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com