ಹುಬ್ಬಳ್ಳಿ-ಧಾರವಾಡ ಅವಳಿ ನಗರ ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ: ಗೃಹ ಸಚಿವ ಪರಮೇಶ್ವರ್

ಯಾವುದೇ ಕಾರಣಕ್ಕೂ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ. ಇದು ಇಲ್ಲದಂತೆ ಮಾಡಲು 3 ತಿಂಗಳ ಗಡುವು ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಡಾ.ಜಿ ಪರಮೇಶ್ವರ್
ಡಾ.ಜಿ ಪರಮೇಶ್ವರ್
Updated on

ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ. ಇದು ಇಲ್ಲದಂತೆ ಮಾಡಲು 3 ತಿಂಗಳ ಗಡುವು ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಿಷೇಧಿತ ವಸ್ತುಗಳ ಸರಬರಾಜನ್ನು ತಡೆಗಟ್ಟಲು ಹಾಗೂ ದಂಧೆಕೋರರ ಮೇಲೂ ನಿಗಾ ವಹಿಸಲು ಗೃಹ ಇಲಾಖೆ ಸನ್ನದ್ಧವಾಗಿದೆ. ಇನ್ನು ಮೂರು ತಿಂಗಳಲ್ಲಿ ಜಿಲ್ಲೆಯನ್ನು ‘ಮಾದಕ ವಸ್ತು ಮುಕ್ತ’ ಎಂದು ಘೋಷಿಸಲಾಗುವುದು ಎಂದರು.

ಇಡೀ ರಾಜ್ಯದಲ್ಲಿ ಡ್ರಗ್ಸ್ ನಿಲ್ಲಿಸಲು ನಿರ್ಧರಿಸಿದ್ದೇವೆ. ಹು-ಧಾಗೆ ಗೋವಾ, ಒಡಿಶಾಗಳಿಂದ ಡ್ರಗ್ಸ್ ಬರಬಹುದು. ಇಲ್ಲಿಯ ಜನರಿಗೆ ಅನಾಹುತ ಆಗಬಾರದು ಎಂದು ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಆರು ತಿಂಗಳು ಅವಕಾಶ ನೀಡಿದ್ದೇನೆ. ಇದನ್ನು ತಡೆಗಟ್ಟದಿದ್ದರೆ‌ ನಂತರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಬ್ ಆಗಲು ಬಿಡುವುದಿಲ್ಲ ಎಂದರು.

ಧಾರವಾಡ ಜಿಲ್ಲೆ ಮತ್ತು ಅವಳಿ ನಗರದ ಅಪರಾಧ ಪ್ರಮಾಣ ರಾಜ್ಯದ ಇತರ ಭಾಗಗಳಿಗಿಂತ ಭಿನ್ನವಾಗಿಲ್ಲ ಎಂದ ಸಚಿವರು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಪರಾಧವನ್ನು ಕಡಿಮೆ ಮಾಡಲು ಪೊಲೀಸರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತಾವಿತ ಹೊಸ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಸ್ತಾವನೆ ಬಂದ ನಂತರ ಪರಿಶೀಲಿಸುವುದಾಗಿ ತಿಳಿಸಿದರು. ಇದಲ್ಲದೆ, ರಾಜ್ಯದಲ್ಲಿ ಇನ್ನೂ 3,000 ಪೊಲೀಸರನ್ನು ನೇಮಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಮಾಯಕರ ಮೇಲೆ ಕೆಲವೇ ಪ್ರಕರಣಗಳು ದಾಖಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಹ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಸೈಬರ್ ಕ್ರೈಂ ಅನ್ನು ನಿಭಾಯಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ . ಕೋಮು ಸಾಮರಸ್ಯ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರತಿ ತಿಂಗಳು ಎಸ್ಸಿ, ಎಸ್ಟಿ ಸಭೆ ಮಾಡಿ ಅವರ ಅಹವಾಲುಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಠಾಣೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಈ ಬಗ್ಗೆ ಕಮಿಷನರೇಟ್ ನಲ್ಲಿಯೂ ದಾಖಲೆ ಇಡಲು ಹೇಳಿದ್ದೇನೆ. ಪ್ರತಿ ತಿಂಗಳು ಪಿಎಸ್ ಐ ಮೇಲಿರುವವರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಪೊಲೀಸ್ ಡೇ ಆಚರಿಸಬೇಕು. ಒಂದು ದಿನ ಟ್ರಾಫಿಕ್, ಕಾನೂನು ಮತ್ತು ಪೊಲೀಸ್ ಸಹಾಯದ ಬಗ್ಗೆ ತಿಳಿಸಬೇಕು.‌ ಇದರ ದಾಖಲೆಗಳನ್ನು ಸಹ ಇಡಬೇಕು. ಮಕ್ಕಳಿಗೆ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು. ಜ‌ನಸ್ನೇಹಿ ಪೊಲೀಸ್ ಆಗಲು ಸೂಚಿಸಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com