ಮೈಸೂರು ಕೃಷಿ ಅಧಿಕಾರಿಗಳ ಬಂಧನ: ವರ್ಗಾವಣೆ ದಂಧೆ, ಮಂತ್ರಿಗಳಿಂದ ಸುಲಿಗೆ ಅಸಲಿ ಎನ್ನುವುದು ಸಾಬೀತು- ಕುಮಾರಸ್ವಾಮಿ

ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರಿನ ಪತ್ರ ಬರೆದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಮೂಲಕ, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಮಂತ್ರಿಗಳಿಂದ ಅಧಿಕಾರಿಗಳ ಸುಲಿಗೆ ನಡೆಯುತ್ತಿದೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 
ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ
ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ

ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರಿನ ಪತ್ರ ಬರೆದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಮೂಲಕ, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಮಂತ್ರಿಗಳಿಂದ ಅಧಿಕಾರಿಗಳ ಸುಲಿಗೆ ನಡೆಯುತ್ತಿದೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪತ್ರವು ನಕಲಿಯೋ ಅಸಲಿಯೋ ಆ ಮಾತು ಹಾಗಿರಲಿ. ಆದರೆ, ಕೃಷಿ ಇಲಾಖೆಯಲ್ಲಿ ಸುಲಿಗೆ, ವರ್ಗಾವಣೆ ದಂಧೆ ನಡೆಯುತ್ತಿರುವುದು ಅಸಲಿ ಎನ್ನುವುದು ಗೊತ್ತಾಯಿತಲ್ಲ ಎಂದ ಅವರು, ಆ ಅಧಿಕಾರಿಗಳು ದೂರಿನ ಪತ್ರ ಯಾಕೆ ಬರೆದರು? ಅವರು ಮೈಸೂರಿನವರಾದರೂ ಆಗಲಿ ಅಥವಾ ಮಂಡ್ಯದವರಾದರೂ ಆಗಲಿ. ಸತ್ಯ ಏನೆಂಬುದು ಬಯಲಿಗೆ ಬಂತಲ್ಲ ಎಂದರು.

ಇಬ್ಬರು ಅಧಿಕಾರಿಗಳನ್ನು ಏಕೆ ವಶಕ್ಕೆ ಪಡೆದಿದ್ದಾರೆ? ಅಧಿಕಾರಿಗಳ ಬಂಧನವಾಗಿದೆ ಅಂದರೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಆಗಿದೆ ಅಂತಲೇ ಅಲ್ಲವೇ? ಆರೋಪಿ ಸ್ಥಾನದಲ್ಲಿರುವ ಸಚಿವರೇ ಪ್ರತಿಯೊಂದಕ್ಕೂ ಉತ್ತರ, ಹೇಳಿಕೆ ಕೊಡುತ್ತಿದ್ದಾರೆ. ಸಿಐಡಿ ಪೊಲೀಸರು ತನಿಖೆಯ ವರದಿಯನ್ನು ಗೃಹ ಸಚಿವರಿಗೆ ಕೊಡುತ್ತಾರೋ ಅಥವಾ ಮುಖ್ಯಮಂತ್ರಿಗಳಿಗೆ ಕೊಡುತ್ತಾರೋ? ಇಲ್ಲವೇ ಆರೋಪಿ ಸ್ಥಾನದಲ್ಲಿರುವ ಸಚಿವರಿಗೆ ಎಲ್ಲಾ ಮಾಹಿತಿಯನ್ನು ಸೋರಿಕೆ ಮಾಡಿತ್ತಾರೋ? ಇದೇನು ತನಿಖೆಯಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.


ಇದೇನು ಸರ್ಕಾರವಾ? ಇವರ ಮೂಗಿನ ನೇರಕ್ಕೆ, ಅದೂ ವಿದ್ಯುತ್ ವೇಗದಲ್ಲಿ, ಅದೂ ಕೇವಲ ಒಂದೇ ವಾರದಲ್ಲಿ ನಮ್ಮ ಸಿಐಡಿ ಪೊಲೀಸರು ಎಲ್ಲವನ್ನೂ ಕಂಡು ಹಿಡಿದುಬಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಆರೋಪಿ ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಇದು ಹಳ್ಳ ಹಿಡಿಯದೆ ಇನ್ನೇನಾಗುತ್ತದೆ ಎಂದು ಅವರು ಕಿಡಿಕಾರಿದರು.

ಸರ್ಕಾರದ ಭ್ರಷ್ಟಾಚಾರ ಬಯಲಿಗೆ ತಂದ ಆ ಮೈಸೂರು ಅಧಿಕಾರಿಗಳನ್ನು ನಾನು ಅಭಿನಂಧಿಸುತ್ತೇನೆ. ಅವರಿಗೆ ನಾನು ಹೇಳುವುದು ಇಷ್ಟೇ. ಹೇಗೂ ರಾಜ್ಯಪಾಲರಿಗೆ ದೂರಿನ ಪತ್ರ ನೀವೇ ಬರೆದಿದ್ದೀರಿ ಎನ್ನುವುದು ಗೊತ್ತಾಗಿ ಹೋಗಿದೆ. ಈಗಲಾದರೂ ನಡೆದಿರುವುದನ್ನು ಧೈರ್ಯವಾಗಿ ಹೊರಗೆ ಹೇಳಿ. ಕಷ್ಟಪಟ್ಟು, ಬಡತನದಲ್ಲಿ ಓದಿ ಸರಕಾರಿ ಕೆಲಸಕ್ಕೆ ಬಂದಿದ್ದೀರಿ. ಆರೂವರೆ ಕೋಟಿ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡಲಾಗುತ್ತಿದೆ ಎಂಬುದನ್ನು ಮನಗೊಂಡು ಜನರ ಪರವಾಗಿ ಮಾತನಾಡಿ. ಸರಕಾರದಲ್ಲಿ ನಡೆಯುತ್ತಿರುವ ಕುಕೃತ್ಯಗಳ ಬಗ್ಗೆ ಸತ್ಯ ಹೇಳಿ. ಎಲ್ಲಾದರೂ ಇದಕ್ಕೆ ಅಂತಿಮ ತೆರೆ ಎಳೆಯಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ಹಾಗದರೆ, ಚಲುವರಾಯಸ್ವಾಮಿ ಅವರು ನಿಮ್ಮ ಹೆಸರನ್ನೇಕೆ ಹೇಳಿದರು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅವರಿಗೆ ನನ್ನದೇ ಚಿಂತೆ ಎಂದರು.

ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರದ ಬಗ್ಗೆಯೂ ಮಾತನಾಡಿದ ಅವರು; ಪದೆಪದೇ ಪುಟ್ಟರಾಜು ಅವರ ಹೆಸರು ಯಾಕೆ ಹೇಳುತ್ತಿದ್ದಾರೆ? ತಮ್ಮ ತಪ್ಪುಗಳನ್ನು ಮರೆಮಾಚಿಕೊಳ್ಳಲು. ನಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ನವರು ಇಂಥ ಕೆಲಸಗಳನ್ನು ಮಾಡುತ್ತಿದ್ದಾರೆ. ಮೊದಲು ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡಿ ನೊಡೋಣ. ಆಗ ನಿಮ್ಮ ಯೋಗ್ಯತೆ ಏನೆಂದು ಅರ್ಥವಾಗುತ್ತದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com