ವಿವಿಗಳು ಮೌಢ್ಯರಹಿತ, ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು. ವಿವಿಗಳಲ್ಲಿ ಧರ್ಮ ನಿರಪೇಕ್ಷತೆ, ಮೌಢ್ಯ ರಹಿತ, ಕಂದಾಚಾರ ರಹಿತ ಹಾಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ವಿವಿಗಳಿಂದ ಬಂದವರು ಮತ್ತೆ ಮೌಢ್ಯಗಳು, ಜಾತಿಯ ಜೊತೆಯಲ್ಲಿದ್ದರೆ ಅವರು ಪಡೆದಿರುವುದು ಶಿಕ್ಷಣ ಎಂದು ಕರೆಯಲಾಗದು ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ಶಿಕ್ಷಣ ಸರಿದಾರಿಯಲ್ಲಿ ಸಾಗದೆ ಹೋದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದು ಹೇಳಿದ್ದಾರೆ.
ಸಾರ್ವಜನಿಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ಜಾತ್ಯತೀತ ವಿರೋಧಿ ಮನೋಭಾವವನ್ನು ಪುರಸ್ಕರಿಸಬಾರದು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾರಣಕ್ಕೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಸಲಹೆ ನೀಡಿದ್ದಾರೆ.
32 ಸಾರ್ವಜನಿಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿವಿಗಳಿಗೆ ಕರ್ನಾಟಕ ರಾಜ್ಯ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ರಾಷ್ಟ್ರೀಯ ಜಿಇಆರ್‌ಗೆ ಹೋಲಿಸಿದರೆ ಶೇಕಡಾ 36 ರಷ್ಟಿದ್ದು ಅದು ಶೇಕಡಾ 27.4 ರಷ್ಟಿದೆ. 2030 ರ ವೇಳೆಗೆ GER ಅನ್ನು 50 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ