‘ನಾಗಪುರ ಶಿಕ್ಷಣ ನೀತಿ’ ಎನ್ನುವ ಡಿಸಿಎಂ ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ‘ಸೋನಿಯಾ ಶಿಕ್ಷಣ ನೀತಿ’ ಜಾರಿಗೆ ತರಲಿದ್ದಾರಾ?

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ‘ನಾಗಪುರ ಶಿಕ್ಷಣ ನೀತಿ’ ಎನ್ನುವ ಉಪ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಎಸ್‌ಇಪಿ ಸೋನಿಯಾ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿದ್ದಾರೆಯೇ ? ಎಂದು ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಪ್ರಶ್ನಿಸಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ‘ನಾಗಪುರ ಶಿಕ್ಷಣ ನೀತಿ’ ಎನ್ನುವ ಉಪ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಎಸ್‌ಇಪಿ ಸೋನಿಯಾ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿದ್ದಾರೆಯೇ ? ಎಂದು ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ರದ್ದುಗೊಳಿಸಿ, ಕಡಿಮೆ ಸಮಯದಲ್ಲಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿಯನ್ನು ತರಲು ಪ್ಲಾನ್ ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುವೆ ಎಂದು ಹೇಳಿದ್ದಾರೆ.

ಬಡವ, ಶ್ರೀಮಂತ ಎನ್ನದೇ ಸರ್ವರಿಗೂ ಕೌಶಲ್ಯ ಆಧಾರಿತ, ‘ಸಮಾನ ಗುಣಮಟ್ಟ’ದ ಶಿಕ್ಷಣ ನೀಡುವ ಅಂಶಗಳನ್ನು ಎನ್‌ಇಪಿ ಒಳಗೊಂಡಿದೆ. ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬಾರದೇ? ಸಮಾನ ಶಿಕ್ಷಣ ನೀಡಿದರೆ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಬಾಗಿಲು ಹಾಕಬೇಕಾಗಬಹುದು ಎಂಬ ಆತಂಕವೇ?

ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎನ್ಇಪಿ ರೂಪಿಸಲಾಗಿದೆ ಎಂಬ ತಮ್ಮ ಹೇಳಿಕೆಯು ಅತ್ಯಂತ ಬೇಜವಾಬ್ದಾರಿಯುತ ಹಾಗೂ ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಅಸಲಿಗೆ ರಾಜ್ಯದ ಡಿಎಸ್‌ಇಆರ್‌ಟಿ, ಅನೇಕ ಶಿಕ್ಷಣ ತಜ್ಞರು, ಕುಲಪತಿಗಳು, ಪಾಲಕರು, ಮಕ್ಕಳ ವೈದ್ಯರು, ತಜ್ಞರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಸುದೀರ್ಘ ಸಮಾಲೋಚನೆ ನಡೆಸಿ ಎನ್‌ಇಪಿಯನ್ನು ರೂಪಿಸಲಾಗಿದೆ ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ. ಸವಾಲು ಸ್ವೀಕರಿಸುವಿರಾ?

ವಿಜ್ಞಾನಿಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಶಿಕ್ಷಕ ಸಮುದಾಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚಿಸಿ ಹತ್ತು ವರ್ಷ ಕಾಲ ಅಧ್ಯಯನ ನಡೆಸಿ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ರದ್ದುಗೊಳಿಸಲು ಕಾರಣವೇನು? ಅದರಲ್ಲಿರುವ ಲೋಪ – ದೋಷಗಳು ಏನು ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ರಾಜ್ಯದ ಜನರಿಗೆ ತಿಳಿಸುವಿರಾ?

ಎನ್‌ಇಪಿಯಲ್ಲಿ ಆಯಾ ರಾಜ್ಯಗಳ ಭಾಷೆ/ ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣದಲ್ಲೂ ಇಂಗ್ಲೀಷೇತರ ಭಾಷೆಯಲ್ಲಿ ಕಲಿತು ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎನ್‌ಇಪಿಯಲ್ಲಿ ಈ ರೀತಿ ವೈವಿಧ್ಯಮಯ ಕಲಿಕೆಗೆ ಅವಕಾಶ ಕಲ್ಪಿಸಿರುವುದರಿಂದ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ನೀಡುತ್ತಿರುವ ಇಂಗ್ಲೀಷ್ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ ಎಂಬ ಭಯ ಕಾಡುತ್ತಿದೆಯೇ?

ಸಿಬಿಎಸ್ಇ ಶಾಲೆಗಳಲ್ಲಿ ಈಗಾಗಲೇ ಎನ್‌ಇಪಿ ಅನುಷ್ಠಾನವಾಗಿದೆ. ಹೀಗಾಗಿ, ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರ ಬಲಾಢ್ಯ ರಾಜಕಾರಣಿಗಳ ಒಡೆತನದಲ್ಲಿರುವ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಗಳಲ್ಲಿನ ಎನ್‌ಇಪಿ ಆಧಾರಿತ ಸಿಬಿಎಸ್‌ಇ ಪಠ್ಯಕ್ರಮದ ಬದಲು ಉದ್ದೇಶಿತ ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗುವುದೇ? ಎಂದೇ ಪ್ರಶ್ನಿಸಿದ್ದಾರೆ.

ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ಎನ್‍ಇಪಿ ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅಷ್ಟೊಂದು ವಿಸಿಗಳನ್ನು ಕೂಡಿಸಿಕೊಂಡು ಯಾವುದೇ ಚರ್ಚೆ ಮಾಡದೇ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕುಲಪತಿಗಳು ಪ್ರಶ್ನೆ ಮಾಡದೇ ಸುಮ್ಮನೇ ಎದ್ದು ಬಂದಿರುವುದು ದುರಂತ ಎಂದರು.

ಜನರು ಅಭಿವೃದ್ಧಿ ಮಾಡಲು ಅಧಿಕಾರ ಕೊಟ್ಟಿದ್ದಾರೆ, ಹೊರತು ರಾಜ್ಯವನ್ನು ಹಿಂದೆ ಕಳುಹಿಸಲು ಅಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ. ಈ ದೇಶದಲ್ಲಿ ದೊಡ್ಡವರು ತಪ್ಪು ಮಾಡಿದಾಗ ಜನರು ದೊಡ್ಡ ಹೋರಾಟಗಳ ಮೂಲಕ ಬದಲಾವಣೆ ತಂದಿದ್ದಾರೆ. ನೀವು ಅಧಿಕಾರ ಸಿಕ್ಕಿದೆ ಅಂತ ಈ ರೀತಿ ಮಾಡಿದರೆ ಜನ ಪಾಠ ಕಲಿಸುತ್ತಾರೆ ಎಂದರು.

ಸರಕಾರ ಕೇವಲ ತಮಗೆ ಮತ ಹಾಕಿದವರನ್ನು ಮಾತ್ರ ನೋಡದಬಾರದು, ಮಕ್ಕಳು, ವಿದ್ಯಾರ್ಥಿಗಳು, ಪ್ರಾಣಿಗಳು, ಸಸ್ಯ ಶಾಮಲೆ ಎಲ್ಲವನ್ನು ನೋಡಬೇಕು. ನೀವು ಬಿಜೆಪಿಯನ್ನು ವಿರೋಧಿಸಿ, ಅದನ್ನು ಬಿಟ್ಡು ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆ ಕೊಡುತ್ತೀರಿ, ಸಿದ್ದರಾಮಯ್ಯ ಒನ್ ಮತ್ತು ಸಿದ್ದರಾಮಯ್ಯ ಟು ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಅವರು ವಿಚಾರ ಮಾಡುವ ಶಕ್ತಿ ಕಳೆದುಕೊಂಡಿದ್ದಾರೊ ಅಥವಾ ಸುತ್ತಲು ಇರುವವರು ಅವರ ದಾರಿ ತಪ್ಪಿಸುತ್ತಿದ್ದಾರೊ ಗೊತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com