ಸರ್ವಪಕ್ಷ ಸಭೆಯ ನಂತರ ಕಾವೇರಿ ಜಲ ವಿವಾದ ಬಗ್ಗೆ ತೀರ್ಮಾನ: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ತಮಿಳು ನಾಡಿಗೆ ಕಾವೇರಿ ನೀರು ಬಿಡುವ ಕುರಿತು ರಾಜ್ಯ ಸರ್ಕಾರ ಇಂದು ಬುಧವಾರ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರು ಬಿಡುವ ಕುರಿತು ರಾಜ್ಯ ಸರ್ಕಾರ ಇಂದು ಬುಧವಾರ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವುದು ದುರದೃಷ್ಟಕರ. ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದು ಅವರಿಗೆ ಗೊತ್ತಿದೆ. ನಾವು ಟೀಕೆಗಳನ್ನು ಎದುರಿಸಿದರೂ ಕಾನೂನನ್ನು ಗೌರವಿಸಿ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಪ್ರತ್ಯೇಕ ಪೀಠವನ್ನು ರಚಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅವರ ಹೇಳಿಕೆ ಬಂದಿದೆ. ಆಗಸ್ಟ್ 31ರವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಲಾಗಿತ್ತು.ಆದರೆ ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಇಂದು, ಸುಪ್ರೀಂ ಕೋರ್ಟ್ ಹೊಸ ಪೀಠವನ್ನು ರಚಿಸುವುದಾಗಿ ಹೇಳಿದೆ. ಇಂದು ಸರ್ವಪಕ್ಷ ಸಭೆ ನಡೆಸುತ್ತೇವೆ. ಸಭೆಯ ನಂತರ ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. 

ನಾಲ್ಕು ಜಲಾಶಯಗಳ ಮೂಲದಲ್ಲಿ 44 ಟಿಎಂಸಿ ನೀರು: ರಾಜ್ಯ ಸರ್ಕಾರವು ತನ್ನ ನಿರ್ದೇಶನವನ್ನು ಮರುಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ರಾಜ್ಯದ ಸಂಸದರು, ಕಾನೂನು ತಜ್ಞರನ್ನು ಸಭೆಗೆ ಆಹ್ವಾನಿಸಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಆಧರಿಸಿ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕರ್ನಾಟಕ ಕೈಗೊಳ್ಳಲಿರುವ ಇತರ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ. ಕೆಆರ್‌ಎಸ್, ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಕೇವಲ 55 ಟಿಎಂಸಿ ಅಡಿ ನೀರು ಲಭ್ಯವಿದೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರೆಡೆ ಕುಡಿಯಲು 44 ಟಿಎಂಸಿ ಅಡಿ ಸೇರಿದಂತೆ ರಾಜ್ಯಕ್ಕೆ ಸುಮಾರು 124 ಟಿಎಂಸಿ ಅಡಿ ಅಗತ್ಯವಿದೆ. ನಮ್ಮಲ್ಲಿ ಸಾಕಷ್ಟು ನೀರು ಇದ್ದರೆ, ತಮಿಳು ನಾಡಿಗೆ ಸಹಾಯ ಮಾಡುತ್ತಿದ್ದೆವು. ಕುಡಿಯಲು ನೀರು ಉಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆಡಳಿತಾರೂಢ ಡಿಎಂಕೆ ಸದಸ್ಯರಾಗಿರುವ ಐಎನ್‌ಡಿಐಎ ಮೈತ್ರಿಕೂಟವನ್ನು ಉಳಿಸಲು ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಡಿ ಕೆ ಶಿವಕುಮಾರ್ ಅವರ ಕಚೇರಿಯಿಂದ ಒದಗಿಸಲಾದ ಮಾಹಿತಿಯ ಪ್ರಕಾರ, ಸಾಮಾನ್ಯ ವರ್ಷದಲ್ಲಿ 2018ರ ಸುಪ್ರೀಂ ಕೋರ್ಟ್ ಆದೇಶದಂತೆ ಬಿಳಿಗುಂಡ್ಲುವಿನ ಅಂತಾರಾಜ್ಯ ಗಡಿಯಲ್ಲಿ ಆಗಸ್ಟ್ 20ರವರೆಗೆ ಖಾತ್ರಿಪಡಿಸಬೇಕಾದ ನೀರಿನ ಹರಿವು 70.07 ಟಿಎಂಸಿ ಅಡಿ ಆಗಿತ್ತು.

ಆದರೆ, ಆಗಸ್ಟ್ 20ಕ್ಕೆ ಬಿಳಿಗುಂಡ್ಲುವಿನಲ್ಲಿ ನಿಜವಾದ ಹರಿವು 24.056 ಟಿಎಂಸಿ ಅಡಿ ಇತ್ತು. ಇದು ಕಳೆದ ವರ್ಷ ಆಗಸ್ಟ್ 20ರಲ್ಲಿ 284.862 ಟಿಎಂಸಿ ಅಡಿ ಆಗಿತ್ತು. ನಾಲ್ಕು ಜಲಾಶಯಗಳಲ್ಲಿ ಮೊನ್ನೆ ಆಗಸ್ಟ್ 21ರಂದು 69.805 ಟಿಎಂಸಿ ಅಡಿ ಆಗಿದ್ದರೆ, ಕಳೆದ ವರ್ಷ ಆಗಸ್ಟ್ 21ರಂದು 102.632 ಟಿಎಂಸಿ ಅಡಿ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com