ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸುವುದು ಸಣ್ಣ ವಿಷಯವಲ್ಲ, ಸರ್ಕಾರ ವತಿಯಿಂದ ವಿಜ್ಞಾನಿಗಳಿಗೆ ಸನ್ಮಾನ: ಸಿಎಂ ಸಿದ್ದರಾಮಯ್ಯ

ಚಂದ್ರಯಾನ-3 (Chandrayaan-3) ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ಇಸ್ರೊ ವಿಜ್ಞಾನಿಗಳ ಸಾಧನೆ ಭಾರತದ ಪಾಲಿಗೆ ಐತಿಹಾಸಿಕವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಂದ್ರಯಾನ-3 (Chandrayaan-3) ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ಇಸ್ರೊ ವಿಜ್ಞಾನಿಗಳ ಸಾಧನೆ ಭಾರತದ ಪಾಲಿಗೆ ಐತಿಹಾಸಿಕವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಇಂದು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಕಂಟ್ರೋಲ್ ರೂಂಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಸನ್ಮಾನಿಸಿ ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದತ್ತ ಅಚ್ಚರಿಯಿಂದ ನೋಡುವ ಪ್ರಶಂಸನೀಯ ಕೆಲಸವನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. 

ಇಡೀ ಜಗತ್ತಿನಲ್ಲಿ ಇದುವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮೂರು ದೇಶಗಳು ಇದುವರೆಗೆ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದವು. ಭಾರತ ನಾಲ್ಕನೇ ದೇಶವಾಗಿದ್ದು ಅದು ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದು ಅತ್ಯಂತ ಅಭಿನಂದನೀಯ ಎಂದರು.

ನಿನ್ನೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ಲೈವ್ ಆಗಿ ವೀಕ್ಷಿಸಿದ್ದು ನನಗೆ ಬಹಳ ಖುಷಿಯಾಯಿತು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸುವುದು ಸಣ್ಣ ವಿಷಯವಲ್ಲ. ವಿಜ್ಞಾನಿಗಳದ್ದೊಂದು ಇದು ದೊಡ್ಡ ಸಾಧನೆ. ಇದಕ್ಕಾಗಿ ದೇಶಾದ್ಯಂತ 1000ಕ್ಕೂ ಹೆಚ್ಚು ವಿಜ್ಞಾನಿಗಳು ಈ ಚಂದ್ರಯಾನ-3ರಲ್ಲಿ ಹಗಲಿರುಳು ಹಲವು ವರ್ಷಗಳಿಂದ ಶ್ರಮಿಸಿದ್ದು ಬೆಂಗಳೂರು-ಕರ್ನಾಟಕದಿಂದಲೇ 500 ವಿಜ್ಞಾನಿಗಳು ಜೊತೆಯಾಗಿದ್ದರು ಎಂದರು.

ವಿಜ್ಞಾನಿಗಳಿಗೆ ಸನ್ಮಾನ: ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇಸ್ರೋ ವಿಜ್ಞಾನಿಗಳನ್ನು ಸರ್ಕಾರ ಗೌರವಿಸಲಿದೆ. ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ಕರ್ನಾಟಕದ 500 ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡಿದ್ದು, ಅವರೆಲ್ಲರನ್ನೂ ಸನ್ಮಾನಿಸಲಾಗುವುದು ಎಂದರು. 3 ಲಕ್ಷ 84 ಕಿಮೀ ಪ್ರಯಾಣ ಮಾಡಿರುವ ವಿಕ್ರಂ ಸಾಧನೆ ಕಡಿಮೆಯಲ್ಲ. ಸರ್ಕಾರದ ಸಹಕಾರ ಬೆಂಬಲ ಇರಲಿದೆ. ಇದು ದೇಶದ ಹೆಮ್ಮೆ. ಸೆಪ್ಟೆಂಬರ್ 02 ರ ನಂತರ ಸನ್ಮಾನ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com