
ಉಡುಪಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವನ್ನು ವಿಳಂಬ ಮಾಡದೆ ಶೀಘ್ರವೇ ಅನುಷ್ಠಾನಗೊಳಿಸಬೇಕು ಮತ್ತು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಅದರ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ(ಎನ್‌ಜಿಒ) ಮಣಿಪಾಲದಲ್ಲಿ ಆಯೋಜಿಸಿದ್ದ ‘ಕರಾವಳಿ ಕರ್ನಾಟಕದಲ್ಲಿ ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಉತ್ತೇಜನ’ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಕಾರಗೊಂಡರೆ ಕಾರವಾರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದರು.
ಏತನ್ಮಧ್ಯೆ, ಬೇಲೆಕೇರಿ ಬಂದರನ್ನು ಸಹ ಅಭಿವೃದ್ಧಿಪಡಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗದ ಉದ್ಯಮಿಗಳು ಮುಂಬೈ ಮತ್ತು ಗೋವಾ ಬಂದರುಗಳನ್ನು ಅವಲಂಬಿಸುವ ಬದಲು ಬೇಲೆಕೇರಿ ಬಂದರಿನ ಮೂಲಕ ತಮ್ಮ ಸರಕುಗಳನ್ನು ರಫ್ತು ಮಾಡಬಹುದು. ಉತ್ತರ ಕರ್ನಾಟಕದ ಉದ್ಯಮಿಗಳಿಗೆ ಇದು ಹೆಚ್ಚು ಲಾಭದಾಯಕ ಉದ್ಯಮವಾಗಲಿದೆ ಎಂದರು.
ಶೆಟ್ಟರ್ ಮಾತನಾಡಿ, ಅರಣ್ಯ ಭೂಮಿ ಇದೆ, ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಪರಿಸರವಾದಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(ಪಿಐಎಲ್) ದಾಖಲಿಸಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ನಿಲ್ಲಿಸಲು ಯತ್ನಿಸಿದರು. ಆದರೆ ರೈಲ್ವೆ ಮಾರ್ಗ ಹೆಚ್ಚು ಹಾನಿಯನ್ನುಂಟುಮಾಡುವುದಿಲ್ಲ. ಬದಲಿಗೆ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಪರಿಸರವಾದಿಗಳ ಹೋರಾಟಗಳು ಒಂದು ಪ್ರದೇಶದ ಅಭಿವೃದ್ಧಿಗೆ ಧಕ್ಕೆಯಾಗಬಾರದು ಎಂದು ಅವರು ಹೇಳಿದರು.
ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ 2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಆದರೆ ಪರಿಸರವಾದಿಗಳು ಹೈಕೋರ್ಟ್‌ನಲ್ಲಿ ಪಿಐಎಲ್‌ಗಳಿಂದಾಗಿ ಯೋಜನೆ ವಿಳಂಬವಾಯಿತು ಎಂದಿದ್ದಾರೆ.
Advertisement