ಮುಂದಿನ ತಿಂಗಳಿಂದ ಕೆಎಸ್ ಆರ್ ಟಿಸಿ ಕಾರ್ಗೋ ಸೇವೆ ಆರಂಭ ಸಾಧ್ಯತೆ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯ ರಸ್ತೆ ನಿಗಮ ಆದಾಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಗೋ ಸೇವೆ ಆರಂಭಿಸಲು ಮುಂದಾಗಿದೆ. ಮುಂದಿನ ತಿಂಗಳು ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ.
ಕೆಎಸ್ ಆರ್ ಟಿಸಿ ಬಸ್ ಗಳ ಸಾಂದರ್ಭಿಕ ಚಿತ್ರ
ಕೆಎಸ್ ಆರ್ ಟಿಸಿ ಬಸ್ ಗಳ ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯ ರಸ್ತೆ ನಿಗಮ ಆದಾಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಗೋ ಸೇವೆ ಆರಂಭಿಸಲು ಮುಂದಾಗಿದೆ. ಮುಂದಿನ ತಿಂಗಳು ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ಬಿಜೆಪಿ ಅವಧಿಯಲ್ಲಿ ನಷ್ಟದ ಕೂಪಕ್ಕೆ ಬಿದ್ದಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ "ಶಕ್ತಿ" ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ KSRTC ಲಾರಿಗಳು ರಸ್ತೆಗೆ ಇಳಿಯಲಿವೆ, ಲಗೇಜ್ ಗಳನ್ನು ರಾಜ್ಯಾದ್ಯಂತ ಸಾಗಣೆ ಮಾಡಲು ಕೆಎಸ್ ಆರ್ ಟಿಸಿ ಲಾಜಿಸ್ಟಿಕ್ಸ್ ವ್ಯವಹಾರಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಸರ್ಕಾರಿ ಸಂಸ್ಥೆಗಳನ್ನು ಲಾಭದ ಹಂತಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದೆ. 

ಈ ನಿಟ್ಟಿನಲ್ಲಿ ಸದ್ಯ ತನ್ನ ವ್ಯಾಪ್ತಿಯಲ್ಲಿ ಲಾರಿಗಳ ಬಳಕೆಗೆ ನಿಗಮ ತಯಾರಿ ನಡೆಸಿದ್ದು, ಇನ್ನು ಮುಂದೆ ಲಾರಿಗಳ ಮೂಲಕ ಲಗೇಜ್‌ಗಳನ್ನು ರಾಜ್ಯವ್ಯಾಪಿ ಸಾಗಣೆ ಮಾಡಲು ಚಿಂತನೆ ನಡೆಸಿದೆ.  ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳನ್ನು ಒದಗಿಸುವ ನಮ್ಮ ಕಾರ್ಗೋ ವಿಭಾಗಕ್ಕೆ 6 ಟನ್ ಸಾಮರ್ಥ್ಯದ 10 ಟ್ರಕ್ ಗಳ ಸೇರ್ಪಡೆಗೊಳಿಸಲು ಕೆಎಸ್ಆರ್'ಟಿಸಿ ಮುಂದಾಗಿದೆ. ಇದರೊಂದಿಗೆ ನಮ್ಮ ಕಾರ್ಗೋ ಸೇವೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಸಾರಿಗೆ ನಿಗಮ ಹೊಂದಿದೆ.

ಕೆಎಸ್‌ಆರ್‌ಟಿಸಿ ಲಾರಿಗೆ ಬಸ್ ಚಾಲಕರನ್ನೇ ಲಾರಿ ಚಾಲಕರನ್ನಾಗಿ ಮಾಡುವ ಸಾಧ್ಯತೆಯಿದೆ. ನಿಗಮದ ನಿಲ್ದಾಣಗಳಿಗೆ ಬಂದು ಬೀಳುವ ಪಾರ್ಸೆಲ್‌ಗಳನ್ನು ಸ್ಥಳೀಯ ಸಿಬ್ಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲಿದ್ದು, ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸುವ ಸಾಧ್ಯೆಯೂ ಇದೆ. ಮುಂದಿನ ತಿಂಗಳು ರಾಜ್ಯದೊಳಗಷ್ಟೇ ಸೇವೆ ನೀಡಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸಿದೆ. ನಂತರದ ದಿನಗಳಲ್ಲಿ ರಾಜ್ಯದೊಳಗೆ ಯಶಸ್ವಿಯಾದರೆ ಹೊರರಾಜ್ಯಗಳಿಗೂ ಸೇವೆ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com