ಜನ ನಮ್ಮ ಮಾಲೀಕರು, ನಾವು ಸೇವಕರು; ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಖಾತೆ, ಪೋಡಿ ಮಾಡಿಸಿ ಅಂತಾ ಜನ ನನ್ನ ಬಳಿ ಬರುತ್ತಿದ್ದಾರೆ. ಅಧಿಕಾರಿಗಳು ಜನರ ಕೆಲಸ ಮಾಡಿದರೆ ಸಿಎಂ ಬಳಿ ಏಕೆ ಬರುತ್ತಾರೆ? ಜನ ಸಣ್ಣಪುಟ್ಟ ಸಮಸ್ಯೆಗಳಿಗೆ ನನ್ನ ಮನೆ ಬಾಗಿಲಿಗೆ ಬರಬೇಕಾ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಮೈಸೂರು: ಖಾತೆ, ಪೋಡಿ ಮಾಡಿಸಿ ಅಂತಾ ಜನ ನನ್ನ ಬಳಿ ಬರುತ್ತಿದ್ದಾರೆ. ಅಧಿಕಾರಿಗಳು ಜನರ ಕೆಲಸ ಮಾಡಿದರೆ ಸಿಎಂ ಬಳಿ ಏಕೆ ಬರುತ್ತಾರೆ? ಜನ ಸಣ್ಣಪುಟ್ಟ ಸಮಸ್ಯೆಗಳಿಗೆ ನನ್ನ ಮನೆ ಬಾಗಿಲಿಗೆ ಬರಬೇಕಾ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂದು ಮೈಸೂರಿನಲ್ಲಿ ಸತತ 8 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸಿದ ಸಿಎಂ, ಕೊನೆಯಲ್ಲಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದರು. ಅಧಿಕಾರಿಗಳು ಜನರ ಕೆಲಸ ಮಾಡಲು ನೆಪ ಹೇಳುತ್ತಿದ್ದಾರೆ. ಜಾತಿ ಪ್ರಮಾಣಪತ್ರ ಪಡೆಯಲು ನೂರೆಂಟು ಸಲ ಅಲೆಯಬೇಕಾ? ಎಲ್ಲಾ ಸೌಲಭ್ಯ ಪಡೆದರೂ ಜನರ ಕೆಲಸ ಏಕೆ ಮಾಡುತ್ತಿಲ್ಲ? ಜನ ನಮ್ಮ ಮಾಲೀಕರು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲ. ನಾವು ಸೇವಕರು ಮಾತ್ರ. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ, ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು ಎಂದು ಆದೇಶಿಸಿದರು.

ನಿಯಮ ಬದ್ದವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ. ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ 16ನೇ ಸ್ಥಾನದಲ್ಲಿದೆ ಎಂದರೆ ನಾಚಿಕೆಗೇಡು. ಇದನ್ನು ನಾನು ಸಹಿಸಲ್ಲ. ಶಿಕ್ಷಣ, ಆರೋಗ್ಯ ಸೂಚ್ಯಂಕ ಸೇರಿ ಎಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ಮಾದರಿ ಜಿಲ್ಲೆಯಾಗಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾನು ಕೆಡಿಪಿ ಸಭೆ ಕರೆದರೆ ರಾಜ್ಯ ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಸಭೆ ಹಾಜರಾಗುವಂತೆ ನೋಟಿಸ್ ಬಂದರೂ ಸಭೆಗೆ ಗೈರಾದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ರಾಜಕೀಯ ಮಾಡಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com