ವಿಜಯಪುರ: ಮೆಕ್ಕೆಜೋಳ ಗೋದಾಮಿನ ಕೊಠಡಿ ಕುಸಿತ, 7 ಕಾರ್ಮಿಕರ ಶವ ಹೊರಕ್ಕೆ, ಓರ್ವನ ರಕ್ಷಣೆ

ನಗರದ ಕೈಗಾರಿಕಾ ಪ್ರದೇಶದ ಖಾಸಗಿ ಗೋದಾಮಿನಲ್ಲಿ ಜೋಳದ ಚೀಲಗಳ ಬೃಹತ್ ರಾಶಿಯಡಿ ಸಿಲುಕಿ 7 ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಪಾರಾಗಿದ್ದಾರೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ.  
ಕಾರ್ಮಿಕರು ಮೃತಪಟ್ಟ ಗೋದಾಮು
ಕಾರ್ಮಿಕರು ಮೃತಪಟ್ಟ ಗೋದಾಮು

ವಿಜಯಪುರ: ನಗರದ ಕೈಗಾರಿಕಾ ಪ್ರದೇಶದ ಖಾಸಗಿ ಗೋದಾಮಿನಲ್ಲಿ ಜೋಳದ ಚೀಲಗಳ ಬೃಹತ್ ರಾಶಿಯಡಿ ಸಿಲುಕಿ 7 ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಪಾರಾಗಿದ್ದಾರೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ.  

ಗೋದಾಮುಗಳಲ್ಲಿ ಇಟ್ಟಿದ್ದ ನೂರಾರು ಜೋಳದ ಚೀಲಗಳು ವಾಲಿ ಕೆಳಗೆ ಬಿದ್ದು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ನಿನ್ನೆ ಸಾಯಂಕಾಲ ಬಿದ್ದಿತ್ತು. ಎಲ್ಲಾ ಕಾರ್ಮಿಕರು ಬಿಹಾರ ಮೂಲದವರು ಎಂದು ವರದಿಯಾಗಿದೆ.

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ, ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತದೇಹಗಳನ್ನು ಹೊರತರುವ ಕಾರ್ಯ ನಡೆಯುತ್ತಿದೆ. ಎಷ್ಟು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ನಿಖರವಾದ ಸಂಖ್ಯೆ ಲಭ್ಯವಿಲ್ಲ ಎಂದು ಅವರು ಹೇಳಿದರು. 

ಇದು ಅತ್ಯಂತ ದುರಂತ ಘಟನೆ ಎಂದು ಬಣ್ಣಿಸಿದ ಸಚಿವರು, ಕಾರ್ಮಿಕರು ಬೇರೆ ರಾಜ್ಯದವರು ಎಂದು ಹೇಳಿದರು. ಮೃತದೇಹಗಳ ಶವಪರೀಕ್ಷೆ ನಡೆಸಿ ಸ್ಥಳೀಯ ಆಡಳಿತವನ್ನು ಸಂಪರ್ಕಿಸುವ ಮೂಲಕ ಆಯಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದರು.

ಮೊದಲು ತನಿಖೆ ನಡೆಯಬೇಕಾಗಿರುವುದರಿಂದ ಘಟನೆಗೆ ನಿಖರವಾದ ಕಾರಣವನ್ನು ಈಗ ಹೇಳಲು ಸಾಧ್ಯವಿಲ್ಲ ಎಂದರು. ಗೋದಾಮಿನ ಮಾಲೀಕರ ತಪ್ಪಾಗಿದ್ದರೆ ನಂತರ ಅದನ್ನು ಸಹ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಘಟನೆ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ವಿಷಯ ತಿಳಿಸಿರುವುದಾಗಿ ತಿಳಿಸಿದ ಸಚಿವರು, ಸಂತ್ರಸ್ತರ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಕಾರ್ಮಿಕರು ಬೇರೆ ರಾಜ್ಯದವರಾಗಿದ್ದರೂ, ಮಾನವೀಯ ಆಧಾರದ ಮೇಲೆ, ಸಂತ್ರಸ್ತರ ಕುಟುಂಬಗಳಿಗೆ ಸ್ವಲ್ಪ ಆರ್ಥಿಕ ನೆರವು ಪಡೆಯಲು ನಾವು ಪ್ರಯತ್ನಿಸುತ್ತೇವೆ. ಅದೇ ಸಮಯದಲ್ಲಿ ಮಾಲೀಕರಿಗೆ ಪರಿಹಾರವನ್ನು ನೀಡುವ ಜವಾಬ್ದಾರಿಯೂ ಇದೆ. ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. 

ಈ ಹಿಂದೆಯೂ ಇದೇ ಗೋದಾಮಿನಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಮಾಲೀಕರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಪ್ರಸ್ತುತ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.

ರಕ್ಷಣಾ ಕಾರ್ಯ: ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಕ್ತಾಯಗೊಂಡಿದ್ದು, ಅಂತಿಮವಾಗಿ ಏಳು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದು, ಒಬ್ಬ ವ್ಯಕ್ತಿಯನ್ನು ರಕ್ಷಿಸಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು.

ಪರಿಹಾರ ಕಾರ್ಯ: ರಾಜಗುರು ಜೋಳ ಸಂಸ್ಕರಣಾ ಉದ್ಯಮದ ಗೋದಾಮಿನ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ಉದ್ಯಮದ ಮಾಲೀಕ ಕಿಶೋರ್ ಕುಮಾರ್ ಜೈನ್ ಅವರು ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. 

ಸರ್ಕಾರದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ. 

ಮೃತರನ್ನು ರಾಜೇಶ್ ಮುಖಿಯಾ (25ವ), ರಾಂಬ್ರಿಜ್ ಮುಖಿಯಾ (29ವ), ಶಂಭು ಮುಖಿಯಾ (26ವ), ರಾಮ್ ಬಾಲಕ್ (52ವ) ಲಖು (45ವ). ದಾಲ್ಚಂದ್ ಮುಖಿಯಾ (20ವ) ಮತ್ತು ಕಿಶನ್ ಕುಮಾರ್ (20ವ) ಎಂದು ಗುರುತಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com