ಕಾಡಾನೆ ಕಾರ್ಯಾಚರಣೆಗೆ ತಡೆ: ಅರ್ಜುನನಿಲ್ಲದೇ ಶಿಬಿರಗಳಿಗೆ ಹಿಂತಿರುಗಿದ ಆನೆಗಳು!

ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ 10 ದಿನಗಳ ಕಾಲ ತಡೆ ನೀಡಿದೆ. 
ಅರ್ಜುನ ಆನೆ
ಅರ್ಜುನ ಆನೆ

ಹಾಸನ: ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ 10 ದಿನಗಳ ಕಾಲ ತಡೆ ನೀಡಿದೆ. ಈ ಕಾರ್ಯಾಚರಣೆಯಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
 
ಕಾಡಾನೆ ದಾಳಿಯ ಪರಿಣಾಮ ಅರ್ಜುನ ಸಾವನ್ನಪ್ಪಿತ್ತು ಇದಕ್ಕೂ ಮುನ್ನ 20 ನಿಮಿಷಗಳ ಕಾಲ ಅರ್ಜುನ ಆನೆ ಕಾಡಾನೆಯೊಂದಿಗೆ ಸೆಣೆಸಿ ಶರಣಾಗಿತ್ತು.

ಅರ್ಜುನ ಆನೆಯ ಸಾವಿನಿಂದ ಅಘಾತ ನೋವಿಗೆ ಒಳಗಾಗಿರುವ ಪಳಗಿಸಿದ ಆನೆಗಳು ಹಾಗೂ ಮಾವುತರಿಗೆ ವಿರಾಮ ನೀಡುವುದಕ್ಕಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿದೆ. 

ಧನಂಜಯ, ಭೀಮ, ಅಶ್ವತ್ಥಾಮ ಹಾಗೂ ಸುಗ್ರೀವ ಆನೆಗಳು 10 ದಿನಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು ಈ ಆನೆಗಳನ್ನು ನಾಗರಹೊಳೆ ಹಾಗೂ ದುಬಾರೆ ಆನೆ ಶಿಬಿರಗಳಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ಅರಣ್ಯಾಧಿಕಾರಿಗಳ ಮಿಸ್ ಫೈರ್ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು: ಮಾವುತ ಆರೋಪ
 
ಆನೆಗಳು ಹಾಗೂ ಮಾವುತರು ಅರ್ಜುನನ ಸಾವಿನ ನೋವಿನಲ್ಲಿ ವಾಪಸ್ಸಾಗಿದ್ದಾರೆ.  ಆನೆ ಸಾವಿನ ಬಗ್ಗೆ ಅಧಿಕಾರಿಗಳು ಮಾವುತರಿಗೆ ಸಮಾಧಾನ ಹೇಳಲು ಯತ್ನಿಸಿದರಾದರೂ ಮಾವುತರು ಏನನ್ನೂ ಮಾತನಾಡದೇ ಮೌನ ವಹಿಸಿದ್ದಾರೆ.

ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಹಾಗೂ ಡಿಸಿಎಫ್ ಮೋಹನ್ ಕುಮಾರ್ ಉಳಿದ ಆನೆಗಳನ್ನು ವಾಪಸ್ ಕಳಿಸುವುದಕ್ಕೂ ಮುನ್ನ ಯೆಸಳೂರು ಅರಣ್ಯ ವ್ಯಾಪ್ತಿಯ ಬಳೆಕೆರೆ ಬಳಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಅರಣ್ಯ ಇಲಾಖೆ 5 ಕಾಡಾನೆಗಳಿಗೆ ರೇಡಿಯೋ ಕಾಲರ್ ನ್ನು ಅಳವಡಿಸಿ ಕರ್ನಾಟಕದ ಗಡಿ ಭಾಗದ ವಿವಿಧ ಅರಣ್ಯಗಳಿಗೆ ಸಾಗಿಸಿದೆ. 10 ದಿನಗಳ ನಂತರ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಮತ್ತು ಉಳಿದವುಗಳಿಗೆ ರೇಡಿಯೊ ಕಾಲರ್ ನ್ನು ಅಳವಡಿಸಲಾಗುತ್ತದೆ. ಇನ್ನೂ ಕಾಡಾನೆಗಳಿಗೆ ರೇಡಿಯೋ ಕಾಲರ್ ಅನ್ನು ಸರಿಪಡಿಸಲು ಅರಣ್ಯದ ಹೆಚ್ಚುವರಿ ಪ್ರಧಾನ ಮತ್ತು ಮುಖ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com