ಕೊಡಗಿನ ಅಂಗನವಾಡಿಗಳಿಗೆ ಹಲವು ತಿಂಗಳಿಂದ ಪೂರೈಕೆಯಾಗುತ್ತಿಲ್ಲ ಮೊಟ್ಟೆ

ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಕಳೆದ ಮೂರು ತಿಂಗಳಿನಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಆದರೆ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದರೂ ತಾಂತ್ರಿಕ ಸಮಸ್ಯೆ ಇದೆ ಎಂದು ಇಲಾಖೆ...
ಮೊಟ್ಟೆ
ಮೊಟ್ಟೆ

ಮಡಿಕೇರಿ: ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಕಳೆದ ಮೂರು ತಿಂಗಳಿನಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಆದರೆ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದರೂ ತಾಂತ್ರಿಕ ಸಮಸ್ಯೆ ಇದೆ ಎಂದು ಇಲಾಖೆ ಹೇಳುತ್ತಿದೆ.

ರಾಜ್ಯದ ಗ್ರಾಮೀಣ ಪ್ರದೇಶದ ಅಂಗನವಾಡಿಗಳು ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಆದರೆ, ಕೊಡಗಿನಲ್ಲಿ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಜಿಲ್ಲೆಯ ಐದು ತಾಲೂಕುಗಳಾದ್ಯಂತ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಹೇಳಿಕೊಂಡಂತೆ, ಜುಲೈ-ಆಗಸ್ಟ್ ತಿಂಗಳಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಕೊಳೆತ ಮೊಟ್ಟೆಗಳನ್ನು ಅಂಗನವಾಡಿಗಳಿಗೆ ವಿತರಿಸಿದ್ದರು. ಈ ಬಗ್ಗೆ ಹಲವು ದೂರುಗಳ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಗುತ್ತಿಗೆದಾರರ ಟೆಂಡರ್ ಅನ್ನು ರದ್ದುಪಡಿಸಿದ್ದಾರೆ. ಅಂದಿನಿಂದ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಸ್ಥಗಿತಗೊಂಡಿದೆ.

ತಾವು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗೆ ಈ ವರ್ಷದ ಮಾರ್ಚ್‌ನಿಂದ ಮೊಟ್ಟೆ ಪೂರೈಕೆಯಾಗಿಲ್ಲ ಎಂದು ಮಡಿಕೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

ಮೊಟ್ಟೆ ಖರೀದಿಸುವ ಮೊತ್ತವನ್ನು ಅಂಗನವಾಡಿ ಖಾತೆಗೆ ಜಮಾ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಆದರೆ, ಸಾಕಷ್ಟು ಬಜೆಟ್ ಇಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ತಿಂಗಳುಗಳಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ ಎಂದು ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ. ಅಲ್ಲದೆ ಮೂರು ತಿಂಗಳಿನಿಂದ ತಮಗೆ ಸಂಬಳವೂ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ್ ಎಎಂ ಅವರನ್ನು ಪ್ರಶ್ನಿಸಿದಾಗ, ''ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಮೊಟ್ಟೆ ಪೂರೈಸಿದ ಹಿಂದಿನ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಲಾಗಿದೆ. ನಾವು ಶೀಘ್ರದಲ್ಲೇ ಮೊಟ್ಟೆಗಳನ್ನು ಖರೀದಿಸುವ ಮೊತ್ತವನ್ನು ಸಂಬಂಧಪಟ್ಟ ಬಾಲಿಕಾ ಸಮೃದ್ಧಿ ಖಾತೆಗಳಿಗೆ ವರ್ಗಾಯಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com